ಸಾಲದ ಮೊರಾಟೋರಿಯಂ ಕುರಿತು ಸರ್ಕಾರ, ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಮೊರಾಟೋರಿಯಂನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದೆಂದು ಸರ್ಕಾರ ಹೇಳಿದೆ. ಆದರೆ ಕೆಲವೇ ವಲಯಗಳು ಮಾತ್ರ ಇದು ಸಿಗಲಿದೆ ಎಂದು ಸರ್ಕಾರ ಅಫಿಡವಿಟ್ ನಲ್ಲಿ ಹೇಳಿದೆ.
ಯಾವ ಕ್ಷೇತ್ರಗಳಿಗೆ ಹೆಚ್ಚಿನ ಪರಿಹಾರ ನೀಡಬಹುದು ಎಂಬ ಪಟ್ಟಿಯನ್ನು ಸರ್ಕಾರ ಸಲ್ಲಿಸಿದೆ. ಈಗ ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ನಾಳೆ ಅಂದರೆ ಬುಧವಾರ ನಡೆಯಲಿದೆ. ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್, ಕೆಲವು ಕಂಪನಿಗಳನ್ನು ಗುರುತಿಸಿದ್ದೇವೆ. ಅವಕ್ಕೆ ವಿನಾಯತಿ ನೀಡಬಹುದು ಎಂದಿದ್ದಾರೆ.
ಕಳೆದ ವಾರದ ಆರಂಭದಲ್ಲಿ ಸಾಲದ ಮೊರಾಟೋರಿಯಂ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ರಿಸರ್ವ್ ಬ್ಯಾಂಕ್ ಹಿಂದೆ ಅಡಗಿ ಕುಳಿತು ನಿಮ್ಮನ್ನು ರಕ್ಷಿಸಿಕೊಳ್ಳಬೇಡಿ ಎಂದಿತ್ತು.
ಕೊರೊನಾ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಗೆ ಬಂದಾಗ ರಿಸರ್ವ್ ಬ್ಯಾಂಕ್ ಸೂಚನೆ ಮೇರೆಗೆ ಬ್ಯಾಂಕ್ ಗಳು ಗ್ರಾಹಕರಿಗೆ ಹಾಗೂ ಕಂಪನಿಗೆ ಈ ಸೌಲಭ್ಯ ನೀಡಿದ್ದವು. ಸಾಲದ ಆರು ತಿಂಗಳ ಕಂತು ಪಾವತಿ ಮುಂದೂಡಲು ಗ್ರಾಹಕರು ಹಾಗೂ ಕಂಪನಿಗಳಿಗೆ ಅವಕಾಶ ನೀಡಲಾಗಿತ್ತು. ಸಾಲ ಮೊರಾಟೋರಿಯಂ ಒಂದು ರೀತಿಯ ತಾತ್ಕಾಲಿಕ ಪರಿಹಾರ ಮಾತ್ರ. ಮುಂದೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಆಗಸ್ಟ್ 31ಕ್ಕೆ ಈ ಸೌಲಭ್ಯ ಕೊನೆಯಾಗಿದೆ. ಕೆಲ ಬ್ಯಾಂಕ್ ಗಳು ಈ ಸೌಲಭ್ಯವನ್ನು ಮತ್ತೆ ವಿಸ್ತರಿಸಬಾರದೆಂದು ಮನವಿ ಮಾಡಿವೆ.