ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಯಾಗಿದ್ದ ಲಾಕ್ಡೌನ್ ನಿಂದಾಗಿ ಸಾರ್ವಜನಿಕರು ತತ್ತರಿಸಿ ಹೋಗಿದ್ದರಲ್ಲದೆ ಆರ್ಥಿಕವಾಗಿಯೂ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ವ್ಯಾಪಾರ – ವಹಿವಾಟುಗಳು ಎಂದಿನಂತೆ ಆರಂಭವಾಗಿವೆ.
ಆದರೆ ಈ ಮೊದಲಿನಂತೆ ವಹಿವಾಟು ನಡೆಯದ ಕಾರಣ ಆರ್ಥಿಕ ಸಮಸ್ಯೆ ಮುಂದುವರೆದಿದ್ದು, ಇದರ ಮಧ್ಯೆ ಕಳೆದ 21 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಬ್ಯಾಂಕ್ ಗ್ರಾಹಕರ ಮೇಲೆ ಹೊರೆ ಏರಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಹೌದು, ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ವಹಿವಾಟುಗಳ ಮೇಲಿನ ಶುಲ್ಕವನ್ನು ಹಿಂಪಡೆದುಕೊಂಡಿತ್ತು. ಆದರೆ ಇದೀಗ ಜುಲೈ 1 ರಿಂದ ಎಟಿಎಂ ವಹಿವಾಟುಗಳ ಮೇಲೆ ಮತ್ತೆ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.