ಚೆನ್ನೈ: ದೇಶದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಹಲವು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಲು ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ತಮಿಳುನಾಡು ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ತಮಿಳುನಾಡು ಸರ್ಕಾರ ಶಾಲೆ ಆರಂಭ ದಿನಾಂಕವನ್ನು ಮುಂದೂಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ಇನ್ನಷ್ಟು ದಿನಗಳ ಕಾಲ ಆರಂಭ ಮಾಡದಿರಲು ನಿರ್ಧರಿಸಿದೆ.
ತಮಿಳುನಾಡಿನಲ್ಲಿ ನವೆಂಬರ್ 16ರಿಂದ 9-12ನೇ ತರಗತಿವರೆಗೆ ಶಾಲೆ ಆರಂಭ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಇದರ ಬೆನ್ನಲ್ಲೇ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ನ.16ರಿಂದ ಶಾಲೆ ಆರಂಭಿಸುವುದಿಲ್ಲ, ಶಾಲೆ ಆರಂಭದ ಬಗ್ಗೆ ಮುಂದಿನ ದಿನಗಳಲ್ಲಿ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.