ನವದೆಹಲಿ: ಕರ್ನಾಟಕ ಸೇರಿದಂತೆ 6 ರಾಜ್ಯಗಳ ರೈತರ ಜೊತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಿದರು.
ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ದೇಶದ 9 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 18 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯ ಯೋಜನೆಗಳನ್ನು ಸ್ಮರಿಸಿದರು. ಗ್ರಾಮೀಣ ಜನರು, ಬಡವರು, ರೈತರ ಹಿತಕ್ಕಾಗಿ ವಾಜಪೇಯಿ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು. ಇಂದು ದೇಶದ ರೈತರ ಖಾತೆಗೆ 18 ಸಾವಿರ ಕೋಟಿ ರೂ. ಸಂದಾಯವಾಗಿದೆ. ಉತ್ತಮ ಆಡಳಿತ, ಬದಲಾವಣೆ ಅಂದರೆ ಇದು. ಈ ಯೋಜನೆಯ ಲಾಭವನ್ನು ದೇಶದ ಎಲ್ಲಾ ರಾಜ್ಯದ ರೈತರು ಪಡೆಯುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ನಮ್ಮ ಜೊತೆ ಕೈಜೋಡಿಸಿಲ್ಲ ಎಂದರು.
ಪಶ್ಚಿಮ ಬಂಗಾಳದ 70 ಲಕ್ಷ ರೈತರಿಗೆ ಈ ಯೋಜನೆ ಲಾಭ ಸಿಗುತ್ತಿಲ್ಲ. ರಾಜಕೀಯ ಉದ್ದೇಶದಿಂದಾಗಿ ಸಿಎಂ ಮಮತಾ ಬ್ಯಾನರ್ಜಿಯವರು ರೈತರಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ಹಲವು ಯೋಜನೆಗಳನ್ನು ತಡೆ ಹಿಡಿಯುತ್ತಿದ್ದಾರೆ. ರೈತರ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಿಎಂ ಬೆಳೆ ವಿಮಾ ಯೋಜನೆ, ಕಿಸಾನ್ ಕಾರ್ಡ್, ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮುಲಕ ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡುವುದೇ ನಮ್ಮ ಸರ್ಕಾರದ ಉದ್ದೇಶ. ಆಧುನಿಕ ಕೃಷಿ ಪದ್ಧತಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ನಾವು ಯತ್ನಿಸುತ್ತಿದ್ದೇವೆ ಎಂದು ಹೇಳಿದರು.