ಕೊರೊನಾ ವೈರಸ್ ಲಸಿಕೆ ಅಭಿಯಾನಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ. ಆದ್ಯತೆ ಆಧಾರದ ಮೇಲೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪಟ್ಟಿ ಸಿದ್ಧಪಡಿಸುತ್ತಿದೆ. ಕೊರೊನಾ ಪೀಡಿತ ಗಂಭೀರ ರೋಗಿಗಳು, ವೈದ್ಯಕೀಯ ಕಾರ್ಯಕರ್ತರು, ಪೊಲೀಸರು, ಸ್ವಚ್ಛತಾ ಕಾರ್ಮಿಕರಂತಹ ಸ್ವಯಂ ಸೇವಕರಿಗೆ ಮೊದಲ ಆದ್ಯತೆ ನೀಡಲಾಗುವುದು. ಸುಮಾರು 30 ಕೋಟಿ ಜನರಿಗೆ 60 ಕೋಟಿ ಲಸಿಕೆಯ ವ್ಯವಸ್ಥೆ ಮಾಡಲಾಗುವುದು. ಲಸಿಕೆಗೆ ಅನುಮೋದನೆ ಸಿಕ್ಕ ತಕ್ಷಣ ಲಸಿಕೆ ನೀಡುವ ಕೆಲಸ ಶುರುವಾಗುವುದು.
ಆದ್ಯತೆಯ ಪಟ್ಟಿಯಲ್ಲಿ ನಾಲ್ಕು ವಿಭಾಗ ಮಾಡಲಾಗಿದೆ. ಸುಮಾರು 50 ರಿಂದ 70 ಲಕ್ಷ ಆರೋಗ್ಯ ವೃತ್ತಿಪರರು, ಎರಡು ಕೋಟಿಗಿಂತ ಹೆಚ್ಚು ಮುಂಚೂಣಿ ಕಾರ್ಮಿಕರು, 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 26 ಕೋಟಿ ಜನರು ಮತ್ತು ಬೇರೆ ರೋಗದಿಂದ ಬಳಲುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ವಿಭಾಗ ಮಾಡಲಾಗಿದೆ.
ಆರಂಭದಲ್ಲಿ ಜನಸಂಖ್ಯೆಯ ಶೇಕಡಾ 23ರಷ್ಟು ಜನರಿಗೆ ಲಸಿಕೆ ಸಿಗಲಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳು ಸೇರಿದಂತೆ ದೇಶದಲ್ಲಿ ಸುಮಾರು ಏಳು ದಶಲಕ್ಷ ಆರೋಗ್ಯ ಕಾರ್ಯಕರ್ತರಿದ್ದಾರೆಂದು ತಜ್ಞರ ಸಮಿತಿ ಅಂದಾಜಿಸಿದೆ. ಇದರಲ್ಲಿ 11 ಲಕ್ಷ ಎಂಬಿಬಿಎಸ್ ವೈದ್ಯರು, 8 ಲಕ್ಷ ಆಯುಷ್ ವೈದ್ಯರು, 1.5 ಮಿಲಿಯನ್ ದಾದಿಯರು, 7 ಲಕ್ಷ ಎಎನ್‌ಎಂ ಮತ್ತು 10 ಲಕ್ಷ ಆಶಾ ಕಾರ್ಯಕರ್ತೆಯರು ಸೇರಿದ್ದಾರೆ. ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಆರಂಭದ ವೇಳೆಗೆ ಪಟ್ಟಿ ಸಿದ್ಧವಾಗಬಹುದು ಎಂದು ಅಂದಾಜಿಸಲಾಗಿದೆ.