
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಡ್ರಗ್ಸ್ ಲಿಂಕ್ ಆರೋಪ ಪ್ರಕರಣ ಸಂಬಂಧ ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿಯನ್ನು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ.
ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಎರಡು ದಿನಗಳ ಹಿಂದೆ ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ನಟಿ ರಿಯಾಳನ್ನು ವಶಕ್ಕೆ ಪಡೆದಿದ್ದ ಎನ್.ಸಿ.ಬಿ. ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಎನ್.ಡಿ.ಪಿ.ಎಸ್. ಕಾಯ್ದೆಯಡಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ನಂಟಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಸುಶಾಂತ್ ಆಪ್ತ ಸಹಾಯಕ ಸ್ಯಾಮ್ಯುಯಲ್ ಮಿರಾಂಡಾ ಹಾಗೂ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಸೇರಿದಂತೆ ಹಲವರನ್ನು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಶೋವಿಕ್ ತನ್ನ ಅಕ್ಕ ರಿಯಾಳಿಗಾಗಿ ಡ್ರಗ್ಸ್ ಖರೀದಿಸುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಈಗ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ.