ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ದೆಹಲಿಯಲ್ಲಿನ ಸರ್ಕಾರಿ ಬಂಗಲೆ ತೆರವು ಮಾಡುವಂತೆ ನೋಟೀಸ್ ನೀಡಲಾಗಿದ್ದು, ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾಗಿದೆ. ಇದರ ಮಧ್ಯೆ ಪ್ರಿಯಾಂಕಾ ಗಾಂಧಿ ಅವರ ಮುಂದಿನ ರಾಜಕೀಯ ನಡೆ ಕುರಿತು ಕುತೂಹಲದ ಮಾಹಿತಿ ಬಹಿರಂಗವಾಗಿದೆ.
2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಪ್ರಿಯಾಂಕ ಗಾಂಧಿ ತಮ್ಮ ವಾಸ್ತವ್ಯವನ್ನು ಉತ್ತರ ಪ್ರದೇಶಕ್ಕೆ ಬದಲಾಯಿಸಲು ಈ ಮೊದಲೇ ತೀರ್ಮಾನಿಸಿದ್ದರೆನ್ನಲಾಗಿದೆ. ಅಲ್ಲದೆ ಪ್ರಿಯಾಂಕಾ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಪ್ರಿಯಾಂಕಾ ಗಾಂಧಿ ಅವರ ವಾಸ್ತವ್ಯಕ್ಕಾಗಿ ಲಕ್ನೋದಲ್ಲಿ ಮನೆಯನ್ನೂ ಸಹ ಫೈನಲ್ ಮಾಡಲಾಗಿದ್ದು, ಕಾಂಗ್ರೆಸ್ ನಾಯಕಿ ಶೀಲಾ ಕೌಲ್ ಅವರಿಗೆ ಸೇರಿದ್ದ ಬಂಗಲೆಯನ್ನು ಗುರುತಿಸಲಾಗಿತ್ತು. ಆದರೆ ಪ್ರಿಯಾಂಕಾ ಪುತ್ರಿ ಮಿರಿಯಾಗೆ ಬೋರ್ಡ್ ಎಕ್ಸಾಮ್ ಇದ್ದ ಕಾರಣ ಇದನ್ನು ಸ್ವಲ್ಪಕಾಲ ಮುಂದೂಡಲಾಗಿದ್ದು, ಇದರ ಮಧ್ಯೆ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಈ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡಿತು ಎನ್ನಲಾಗಿದೆ.