ದೇಶಾದ್ಯಂತ ಮತ್ತೊಮ್ಮೆ ಅನ್ನದಾತನ ರಣಕಹಳೆ ಮೊಳಗಲಿದೆ. ಫೆ.6ರಂದು ರಾಷ್ಟ್ರಾದ್ಯಂತ ರೈತರು ಕರೆ ನೀಡಿರುವ ಹೆದ್ದಾರಿ ತಡೆಗೆ ರಾಜ್ಯ ರೈತ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯದಲ್ಲಿ ಕೂಡ ರೈತರು ಮತ್ತೊಮ್ಮೆ ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಈಗಾಗಲೇ ದೆಹಲಿಯ ಸಿಂಘು ಗಡಿ, ಟಕ್ರಿ, ಗಾಜಿಪುರ ಗಡಿಗಳಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಕಳೆದ 69ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ. ಫೆ.6ರಂದು ನಡೆಯಲಿರುವ ಹೆದ್ದಾರಿ ಬಂದ್ ಪ್ರತಿಭಟನೆ ರೂಪು ರೇಷೆ ಕುರಿತಾಗಿ ರೈತ ಮುಖಂಡರ ಜೊತೆ ಕೋಡಿಹಳ್ಳಿ ಚಂದ್ರಶೇಖರ್ ಚರ್ಚೆ ನಡೆಸಲಿದ್ದಾರೆ.
ಒಟ್ಟಾರೆ ಫೆ.6ರಂದು ರಾಷ್ಟ್ರಾದ್ಯಂತ ರೈತರ ಹೋರಾಟ ತೀವ್ರಗೊಳ್ಳಲಿದ್ದು, ದೇಶದ ಹೆದ್ದಾರಿಗಳು ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆಯಿದೆ. ರೈತರಿಂದ ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಮುಂಜಾಗೃತಾ ಕ್ರಮ ಕೈಗೊಳ್ಳುತ್ತಿದ್ದು, ಸಿ ಆರ್ ಪಿ ಎಫ್, ಆರ್ ಎ ಎಫ್ ಸೇರಿದಂತೆ ಭದ್ರತೆಗೆ ಸಿದ್ಧತೆ ನಡೆಸಲಾಗಿದೆ. ಬಸ್ ಗಳಿಗೆ ಕೂಡ ತಂತಿ ಬೇಲಿ ಅಳವಡಿಸಲೂ ಪೊಲೀಸ್ ಇಲಾಖೆ ಮುಂದಾಗಿದೆ.