ನವದೆಹಲಿ: ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಭಾರತ್ ಬಯೋಟೆಕ್ ಹಾಗೂ ಪುಣೆಯ ಸಿರಮ್ ಇನ್ ಸ್ಟಿಟ್ಯೂಟ್ ಜೊತೆ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ಲಸಿಕೆ ವಿಚಾರವಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಶೀಲ್ಡ್ ಲಸಿಕೆ ಒಂದು ಡೋಸ್ ಗೆ 200 ರೂ ದರ ನಿಗದಿ ಮಾಡಲಾಗಿದ್ದು, ಕೇಂದ್ರ ಸರ್ಕಾರ ಸಿರಮ್ ಇನ್ಸ್ ಟಿಟ್ಯೂಟ್ ನಿಂದ 1.1 ಕೋಟಿ ಲಸಿಕೆ ಖರೀದಿ ಮಾಡಲಿದೆ. ಪುಣೆಯ ಸಿರಮ್ ಇನ್ಸಿಟ್ಯೂಟ್ ನಿಂದ ಇಂದು ರಾತ್ರಿಯಿಂದಲೇ ದೇಶದ ವಿವಿಧ ರಾಜ್ಯಗಳಿಗೆ ಲಸಿಕೆ ರವಾನೆಯಾಗಲಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಬೆಳಗಾವಿಗೂ ಇಂದು ರಾತ್ರಿಯೇ ಕೊರೊನಾ ಸಂಜೀವಿನಿ ಬಂದು ತಲುಪಲಿದೆ.
ಇನ್ನು ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿರುವ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಲಸಿಕಾ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಎರಡೂ ಲಸಿಕೆಗಳು ಭಾರತದಲ್ಲಿಯೇ ತಯಾರಾಗಿದ್ದು, ಜನವರಿ 16ರಂದು ವಿಶ್ವದ ಅತಿದೊಡ್ಡ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ. ಚುನಾವಣಾ ಮಾದರಿಯಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗುತ್ತದೆ ಎಂದು ಹೇಳಿದರು.