
ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್, ಡೆನ್ಮಾರ್ಕ್ ಓಪನ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಕೋಪನ್ ಹ್ಯಾಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಸ್ಪರ್ಧೆಯಲ್ಲಿ ಪುರುಷರ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ವೇದಾಂತ ಚಿನ್ನವನ್ನು ತಮ್ಮದಾಗಿಸಿಕೊಂಡ್ರು.
ಎರಡು ದಿನಗಳ ಹಿಂದಷ್ಟೆ ಇದೇ ಸ್ಪರ್ಧೆಯಲ್ಲಿ ವೇದಾಂತ್ ಬೆಳ್ಳಿ ಪದಕವನ್ನೂ ಗೆದ್ದುಕೊಂಡಿದ್ದರು. 16 ವರ್ಷದ ಪುರುಷರ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ವೇದಾಂತ್‌ಗೆ ಚಿನ್ನದ ಪದಕ ಸಿಕ್ಕಿದೆ. ಸ್ಥಳೀಯ ಈಜುಪಟು ಅಲೆಕ್ಸಾಂಡರ್ ಎಲ್ ಜೋರ್ನ್ ಅವರನ್ನು 0.10 ರಿಂದ ಹಿಂದಿಕ್ಕಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಗನ ಸಾಧನೆ ಬಗ್ಗೆ ಹೆಮ್ಮೆಪಟ್ಟುಕೊಂಡಿರುವ ಆರ್.ಮಾಧವನ್, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಕೂಡ ಹಂಚಿಕೊಂಡಿದ್ದಾರೆ. ಪದಕ ಪ್ರದಾನ ಸಮಾರಂಭದ ವಿಡಿಯೋವನ್ನು ಕೂಡ ಮಾಧವನ್ ಜಾಲತಾಣದಲ್ಲಿ ಹಾಕಿದ್ದಾರೆ. ಈ ಹಿಂದೆ 2021ರ ಮಾರ್ಚ್‌ನಲ್ಲಿ ಲಾಟ್ವಿಯಾ ಓಪನ್ ಸ್ಪರ್ಧೆಯಲ್ಲಿ ವೇದಾಂತ್ ಕಂಚಿನ ಪದಕ ಗೆದ್ದಿದ್ದರು.
ಕಳೆದ ವರ್ಷ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ 7 ಪದಕಗಳನ್ನು ಗಳಿಸಿದ್ದರು. ವೇದಾಂತ್ ಸಾಧನೆ ಬಗ್ಗೆ ಅನೇಕ ಸಿನಿ ತಾರೆಯರು, ಸೆಲೆಬ್ರಿಟಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
https://www.instagram.com/p/CcZnrnMD-W-/?utm_source=ig_embed&ig_rid=bc000122-6b97-4792-88b7-d719f964d5d1