ಐಟಿ ಉದ್ಯೋಗಿಗಳಿಗೆ ಉದ್ಯೋಗದ ಭದ್ರತೆ ಕುರಿತಂತೆ ಯಾವುದೇ ಸುರಕ್ಷತೆ ಇಲ್ಲ ಎಂಬ ಮಾತುಗಳ ಮಧ್ಯೆ ಚೆನ್ನೈನ ಕಾರ್ಮಿಕ ನ್ಯಾಯಾಲಯ ನೀಡಿರುವ ಮಹತ್ವದ ತೀರ್ಪು ಎಲ್ಲರ ಗಮನ ಸೆಳೆದಿದೆ. ಟಿಸಿಎಸ್ ಉದ್ಯೋಗಿ ವಜಾ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ 90 ದಿನದೊಳಗೆ ಮತ್ತೆ ಕೆಲಸ ನೀಡುವಂತೆ ಆದೇಶಿಸಿರುವುದರ ಜೊತೆಗೆ ಶೇಕಡಾ 50 ವೇತನವನ್ನು ಮೂರು ತಿಂಗಳೊಳಗಾಗಿ ನೀಡುವಂತೆ ಸೂಚಿಸಿದೆ.
20 ವರ್ಷಗಳ ಕಾಲ ಟಿಸಿಎಸ್ ನಲ್ಲಿ ಕೆಲಸ ಮಾಡಿದ್ದ ಮಹಿಳಾ ಉದ್ಯೋಗಿ 2017ರಲ್ಲಿ ಅನಾರೋಗ್ಯಕ್ಕೆ ಒಳಗಾದ ವೇಳೆ ಗೈರುಹಾಜರಾಗಿದ್ದರು. ತಮ್ಮ ಅನಾರೋಗ್ಯದ ಕುರಿತು ವೈದ್ಯಕೀಯ ಪುರಾವೆಗಳನ್ನು ಸಹ ಟಿಸಿಎಸ್ ಆಡಳಿತ ಮಂಡಳಿಗೆ ನೀಡಿದ್ದರು. ಆದರೆ ಇದ್ಯಾವುದನ್ನು ಪರಿಗಣಿಸದೆ ಅವರನ್ನು ವಜಾ ಮಾಡಲಾಗಿತ್ತು.
ಬಳಿಕ ಮಹಿಳಾ ಉದ್ಯೋಗಿ ಚೆನ್ನೈನ ಕಾರ್ಮಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಟಿಸಿಎಸ್, ವಜಾಗೊಂಡ ಉದ್ಯೋಗಿ ಕೆಲಸಕ್ಕೆ ಬೇಕಾದ ತಾಂತ್ರಿಕ ನೈಪುಣ್ಯವನ್ನು ಹೊಂದಿರಲಿಲ್ಲ. ಅಲ್ಲದೆ ಸುಮಾರು 700 ದಿನ ಬೆಂಚ್ ನಲ್ಲಿ ಕಳೆದಿದ್ದರು ಎಂದು ವಾದಿಸಿತ್ತು. ಹೀಗಾಗಿ ಯಾವುದೇ ಕೆಲಸವಿಲ್ಲದೆ ಎರಡು ವರ್ಷ ವೇತನ ಪಡೆದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ಈ ವಾದವನ್ನು ತಳ್ಳಿ ಹಾಕಿದ ಕಾರ್ಮಿಕ ನ್ಯಾಯಾಲಯ ಉದ್ಯೋಗಿಯ ಮರು ನೇಮಕಕ್ಕೆ ಆದೇಶಿಸಿದೆ.