ಕೊರೊನಾ ಸೋಂಕನ್ನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಬಹುದೆಂದು ಕೆಲವರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.
ಇದೀಗ ವಿಶ್ವ ಆರೋಗ್ಯ ಸಂಸ್ಥೆ ಗಿಡಮೂಲಿಕೆಗಳ ಕ್ಲಿನಿಕಲ್ ಪರೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಈ ಮೂಲಕ ಆಯುರ್ವೇದ ಚಿಕಿತ್ಸೆಗೆ ಮಣೆ ಹಾಕಿದಂತಾಗಿದೆ. ಜೊತೆಗೆ ಭಾರತೀಯ ಮೂಲದ ಆಯುರ್ವೇದ ಚಿಕಿತ್ಸೆಗೆ ಈಗ ವಿಶ್ವದ ಮಾನ್ಯತೆ ಸಿಗುವ ಸಾಧ್ಯತೆ ಇದೆ.
ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ವಿಶ್ವದ ಎಲ್ಲಾ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನ ನಡೆಸಿದ್ದು, ಆದರೆ ಇದಕ್ಕೆ ಪೂರಕವಾದ ಯಶಸ್ಸು ಸಿಕ್ಕಿಲ್ಲ. ರಷ್ಯಾ ಸೇರಿದಂತೆ ಕೆಲವೊಂದು ರಾಷ್ಟ್ರಗಳು ಲಸಿಕೆ ಸಿದ್ಧವೆಂದು ಹೇಳುತ್ತಿದ್ದರೂ ಅಡ್ಡಪರಿಣಾಮಗಳ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದ ಆಯುರ್ವೇದ ಚಿಕಿತ್ಸೆಯ ಕ್ಲಿನಿಕಲ್ ಟ್ರಯಲ್ ಗೆ ವಿಶ್ವ ಆರೋಗ್ಯ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗಿದೆ.