ನವದೆಹಲಿ: ಕೋವಿಡ್ ಲಸಿಕೆ ಯಾವಾಗ ಬರಲಿದೆ ಎಂದು ನಿರ್ಧಾರವಾಗಿಲ್ಲ. ಎಷ್ಟು ಪ್ರಮಾಣದ ಡೋಸೆಜ್ ನೀಡಬೇಕು, ದರ ಎಷ್ಟು ಎಂಬಿತ್ಯಾದಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ಕೋವಿಡ್ ಲಸಿಕೆ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದ ದೇಶದ ಜನತೆಗೆ ನಿರಾಸೆಯಾಗಿದೆ.
ಕೋವಿಡ್ ವಿಚಾರವಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಹಲವರಿಂದ ರಾಜಕಾರಣ ಮಾಡಲಾಗುತ್ತಿದೆ. ಈ ರಾಜಕಾರಣ ಮಾಡುವವರನ್ನು ತಡೆಯಲಾಗದು. ಕೊರೊನಾ ಲಸಿಕೆ ಯಾವಾಗ ಬರಲಿದೆ ಎಂಬುದು ನಿರ್ಧಾರವಾಗಿಲ್ಲ, ಆದರೆ ವಿಜ್ಞಾನಿಗಳು ಅವರ ಕೆಲಸ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಶೀಘ್ರದಲ್ಲಿ ಲಸಿಕೆ ಲಭ್ಯವಾಗುವ ಭರವಸೆಯಿದೆ. ವಿಶ್ವಾದ್ಯಂತ ಪೈಪೋಟಿಯಲ್ಲಿ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಆದರೆ ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ ಎಂದು ಹೇಳಿದರು.
ಯಾವುದೇ ಸಮಯದಲ್ಲೂ ಲಸಿಕೆ ಲಭ್ಯವಾಗಬಹುದು. ರಾಜ್ಯ ಸರ್ಕಾರಗಳು ಲಸಿಕೆ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸಿಬ್ಬಂದಿಗಳು ಮಾನಿಟರಿಂಗ್, ಆನ್ ಲೈನ್ ಟ್ರೇನಿಂಗ್ ನೀಡಿ ಸರ್ವಸನ್ನದ್ಧರನ್ನಾಗಿ ಮಾಡಬೇಕು. ಲಸಿಕೆ ಬಂದ ಬಳಿಕ ಎಲ್ಲರಿಗೂ ಲಭ್ಯವಾಗುವ ವ್ಯವಸ್ಥೆ ಮಾಡಲಾಗುವುದು ಎಂದರು.
ಇದೇ ವೇಳೆ ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚವಾಗುವ ಸಾಧ್ಯತೆಯಿದೆ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಅಗತ್ಯ. ಹಲವರು ಸೋಂಕು ತಗುಲಿದ್ದರೂ ಮುಚ್ಚಿಡುವ ಪ್ರಯತ್ನ ನಡೆಸಿದ್ದಾರೆ ಇಂತಹ ನಿರ್ಲಕ್ಷ್ಯ ಸರಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಬಹಳ ಮುಖ್ಯ. ಲಸಿಕೆ ಸಿಗುವವರೆಗೂ ಉದಾಸೀನ ಬೇಡ ಎಂದು ಎಚ್ಚರಿಸಿದರು.