ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ. ಇದೀಗ ಕೊರೊನಾ ಸೇನಾನಿಗಳಿಗೆ ಲಸಿಕೆ ನೀಡಲಾಗುತ್ತಿದ್ದು ಮಂಗಳವಾರದವರೆಗೆ ಒಟ್ಟು 6 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಲಸಿಕೆ ಪಡೆದುಕೊಂಡ 7.75 ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ ಶೇಕಡ 97 ರಷ್ಟು ಮಂದಿ ಲಸಿಕೆ ಕುರಿತು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದು, 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಶೇಕಡಾ 40ಕ್ಕಿಂತ ಕಡಿಮೆ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ‘ಜೀವನ್ ಜ್ಯೋತಿ ಬೀಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ
ಇದರ ಮಧ್ಯೆ ಕೊರೊನಾ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಅಥವಾ ತುರ್ತು ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡ ಸಂದರ್ಭದಲ್ಲಿ ವಿಮಾ ಸೌಲಭ್ಯ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ.
ಮಂಗಳವಾರದಂದು ರಾಜ್ಯಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಲಾಗಿದ್ದು, ಲಸಿಕೆ ನೀಡುವ ಕೇಂದ್ರಗಳಲ್ಲಿ ಅಡ್ಡ ಪರಿಣಾಮಗಳನ್ನು ಪಟ್ಟಿಮಾಡಿ ಅದಕ್ಕೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಲಸಿಕೆ ಪಡೆದ ನಂತರ 30 ನಿಮಿಷಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಿ ಆರೋಗ್ಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಒಂದೊಮ್ಮೆ ಅಡ್ಡ ಪರಿಣಾಮ ಕಾಣಿಸಿಕೊಂಡರೆ ಅವರಿಗೆ ತಕ್ಷಣವೇ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದ್ದು, ಹೀಗಾಗಿ ವಿಮೆ ಸೌಲಭ್ಯ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.