ಅಹಮದಾಬಾದ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಸಂಶೋಧನೆಗಳು ಭರದಿಂದ ಸಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಕೊರೊನಾ ಲಸಿಕಾ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಅಹಮದಾಬಾದ್ ನ ಝೈಡಸ್ ಬಯೋಪಾರ್ಕ್ ಸಂಸ್ಥೆಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಕೊರೊನಾ ಸೋಂಕಿಗೆ ಸಂಸ್ಥೆ ತಯಾರಿಸುತ್ತಿರುವ ಝೈಕೋವಿಡ್ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಿಸಿದರು. ಇದೇ ವೇಳೆ ಲಸಿಕೆ ಸಂಶೋಧಿಸುತ್ತಿರುವ ವಿಜ್ಞಾನಿಗಳ ಜೊತೆಯೂ ಚರ್ಚೆ ನಡೆಸಿದರು.
ಹೈದರಾಬಾದ್ ಗೆ ಭೇಟಿ ನೀಡಲಿರುವ ಪ್ರಧಾನಿ, ಕೊರೊನಾ ವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗದಲ್ಲಿ ನಿರತವಾಗಿರುವ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಪರಿಶೀಲಿಸಲಿದ್ದಾರೆ.
ನಂತರದಲ್ಲಿ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಆಸ್ಟ್ರಾಜನಿಕಾ ಲಸಿಕೆ ತಯಾರಿ ಪರಿಶೀಲಿಸಲಿದ್ದಾರೆ.