
ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಲಸಿಕೆಯನ್ನು ಸಿದ್ಧಪಡಿಸಲು ಎಲ್ಲ ರಾಷ್ಟ್ರಗಳು ಪ್ರಯತ್ನ ನಡೆಸಿರುವಾಗಲೇ ಭಾರತದಲ್ಲಿ ಚಿಕಿತ್ಸೆಗಾಗಿ ಲಸಿಕೆ ಅಭಿವೃದ್ಧಿಪಡಿಸಿದ್ದು, ಆಗಸ್ಟ್ 15ರ ವೇಳೆಗೆ ಇದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಭಾರತದ ಪಾಲಿಗೆ ಆಗಸ್ಟ್ 15 ಮಹತ್ವದ ದಿನವಾಗಿದ್ದು, ಈ ದಿನದಂದೇ ಭಾರತ, ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದಿತ್ತು. ಇದೀಗ ಕೊರೊನಾ ಕಾರಣಕ್ಕೆ ಜನ ಕಂಗೆಟ್ಟಿರುವ ಮಧ್ಯೆ ಲಸಿಕೆಯನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಿದರೆ ಅರ್ಥಪೂರ್ಣ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್, ಲಸಿಕೆಯ ಕ್ಲಿನಿಕಲ್ ಟ್ರಯಲ್ ಗೆ ಹೆಚ್ಚಿನ ಅವಕಾಶ ನೀಡದೆ ತರಾತುರಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ ಎಂದು ವೈದ್ಯಕೀಯ ತಜ್ಞರು ಹಾಗೂ ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ, ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರೋತ್ಸವದ ಭಾಷಣದಲ್ಲಿ ಲಸಿಕೆ ಕಂಡುಹಿಡಿಯಲಾದ ಕುರಿತು ಘೋಷಣೆ ಮಾಡುವ ಸಲುವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಆತುರ ಮಾಡುತ್ತಿದೆ ಎಂದು ದೂರಿದ್ದಾರೆ.
ಲಸಿಕೆ ಕುರಿತು ಏನೇ ವಾದ-ವಿವಾದಗಳಿರಲಿ ಭಾರತ ಇದರಲ್ಲಿ ಯಶಸ್ವಿಯಾಗಿ ಸಾರ್ವಜನಿಕರಿಗೆ ಆದಷ್ಟು ಶೀಘ್ರದಲ್ಲಿ ಲಭ್ಯವಾಗಲಿ ಎಂಬುದು ಎಲ್ಲರ ಬಯಕೆಯಾಗಿದೆ.