ಪಾಟ್ನಾ: ಇದನ್ನು ವಿಚಿತ್ರ ಘಟನೆ ಎನ್ನಬೇಕೋ ಅಥವಾ ದುರಂತ ಘಟನೆ ಎಂದು ಕರೆಯಬೇಕೋ ಗೊತ್ತಿಲ್ಲ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜಿಲ್ಲಾ ಕೋರ್ಟ್ ಆವರಣದಲ್ಲೇ ಬಾಲಕಿಯನ್ನು ವಿವಾಹವಾಗಿರುವ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ.
ಆರೋಪಿ ಮೊಹಮ್ಮದ್ ರಾಜಾ ಎಂದು ತಿಳಿದುಬಂದಿದೆ. ರಹೀಂಪುರ ರುದೌಲಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದ ಮೊಹಮ್ಮದ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮುಸ್ಸಾರಿ ಘರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ನನ್ನು ಬಂಧಿಸಲಾಗಿತ್ತು.
ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಪೋಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಂತ್ರಸ್ತ ಬಾಲಕಿಯ ಮನೆಯವರೊಂದಿಗೆ ಮೊಹಮ್ಮದ್ ಮನೆಯವರು ಮಾತುಕತೆ ನಡೆಸಿ ಇದೀಗ ಆರೋಪಿ ಮುಸ್ಲೀಂ ಧರ್ಮಗುರುಗಳ ಸಮ್ಮುಖದಲ್ಲಿ ಬಾಲಕಿಯನ್ನು ವಿವಾಹವಾಗಿದ್ದಾನೆ. ವಿವಾಹದ ಬೆನ್ನಲ್ಲೇ ಧರ್ಮಗುರುವನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಬಾಲಕಿ ಅಪ್ರಾಪ್ತಳಾಗಿರುವುದರಿಂದ ಇದನ್ನು ಬಾಲ್ಯ ವಿವಾಹ ಎಂದೂ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.