ನವದೆಹಲಿ: ಕೊರೊನಾ ವಿರುದ್ಧ ಇಡೀ ವಿಶ್ವವೇ ಒಟ್ಟಾಗಿ ಹೋರಾಟ ನಡೆಸಿದೆ. ಕೋವಿಡ್ ವಿರುದ್ಧದ ಹೋರಾಟ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೇರಿದ್ದಲ್ಲ. ಇಡೀ ವಿಶ್ವವೇ ಇಂದು ಸವಾಲುಗಳನ್ನು ಎದುರುಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿತ್ತು. ಅಪರಿಚಿತ ಶತ್ರು ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ. ಕೊರೊನಾ ವಿರುದ್ಧ ದೀಪ ಹಚ್ಚಲು ನೀಡಿದ್ದ ಕರೆಯನ್ನು ಕೆಲವರು ಗೇಲಿ ಮಾಡಿದರು. ಮನೋಬಲ ಕುಂದಿಸುವ ಪ್ರಯತ್ನ ಮಾಡಿದ್ರು. ಅಪರಿಚಿತ ಶತ್ರುವಿನ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಿದ್ದೇವೆ.
2 ಸಾವಿರ ವಾಹನಗಳೊಂದಿಗೆ ಶಶಿಕಲಾ ನಟರಾಜನ್ ಗ್ರ್ಯಾಂಡ್ ಎಂಟ್ರಿ
ಕೋವಿಡ್ ವಿರುದ್ಧದ ಹೋರಾಟ ಕೇವಲ ಪಕ್ಷಕ್ಕೆ ಸೇರಿದ್ದಲ್ಲ. ಕೋವಿಡ್ ಗೆ ಸ್ವದೇಶಿ ಲಸಿಕೆ ಕಂಡು ಹಿಡಿದಿದ್ದೇವೆ. ವಿಶ್ವಕ್ಕೆ ಅತೀ ಹೆಚ್ಚು ಲಸಿಕೆ ನೀಡಿರುವ ದೇಶ ಭಾರತ. ಭಾರತದ ಮೇಲೆ ಎಲ್ಲರಿಗೂ ನಂಬಿಕೆ, ವಿಶ್ವಾಸ ಹೆಚ್ಚಿದೆ. ಇಡೀ ವಿಶ್ವ ಭಾರತದ ಮೇಲೆ ನಂಬಿಕೆ ಇಟ್ಟಿದೆ. ಮಾನವ ಇತಿಹಾಸದಲ್ಲೇ ಭಾರತದ ಸಾಧನೆ ಅನನ್ಯ ಎಂದರು.
ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು. ಅವಕಾಶಗಳು ಭಾರತದ ಬಾಗಿಲ ಬಳಿ ಬಂದು ನಿಂತಿವೆ. ಭಾರತದಲ್ಲಿ ಈಗ ದಾಖಲೆ ಪ್ರಮಾಣದಲ್ಲಿ ವಿದೇಶಿ ಹೂಡಿಕೆಯಾಗುತ್ತಿದೆ. ಪ್ರತಿ ತಿಂಗಳು ಡಿಜಿಟಲ್ ವೇದಿಕೆ ಮೂಲಕ 4 ಲಕ್ಷ ಕೋಟಿ ವ್ಯವಹಾರ ನಡೆಯುತ್ತಿದೆ. ಇಡೀ ಮನುಕುಲ ದೊಡ್ದ ಸಂಕಷ್ಟದಲ್ಲಿ ಸಿಲುಕಿದೆ. ಆತ್ಮನಿರ್ಭರ ಭಾರತದ ನಿರ್ಮಾಣ ಅನಿವಾರ್ಯವಾಗಿದೆ. ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಯುವಕರ ಮೇಲೆ ಭಾರತದ ಭವಿಷ್ಯ ನಿಂತಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ನಾನು ಆಭಾರಿಯಾಗಿದ್ದೇನೆ. ಅವರ ಜೀವನ ರೈತರಿಗೆ ಅರ್ಪಿತವಾಗಿದೆ. ದೇವೇಗೌಡರು ಉತ್ತಮ ಸಲಹೆ ನೀಡಿದ್ದಾರೆ. ಶೇ.88ರಷ್ಟು ರೈತರ ಬಳಿ ಕೇವಲ 2 ಹೆಕ್ಟೇರ್ ಗಿಂತ ಕಡಿಮೆ ಜಮೀನಿದೆ. ಕಡಿಮೆ ಜಮೀನು ಹೊಂದಿರೋ ರೈತರಿಗೆ ಸರ್ಕಾರದಿಂದ ಸಹಕಾರ ನೀಡಬೇಕು ಎಂದು ಹೇಳಿದ್ದರು. ಸಣ್ಣ ರೈತರು ಬ್ಯಾಂಕ್ ಗಳಲ್ಲಿ ಖಾತೆಯನ್ನೇ ತೆರೆದಿರುವುದಿಲ್ಲ. ಹೀಗಾಗಿ ಸಾಲಮನ್ನಾದಿಂದ ಸಣ್ಣ ರೈತರು ವಂಚಿತರಾಗಿದ್ದಾರೆ. ಸಣ್ಣ ರೈತರ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ.
ಫಸಲ್ ಭೀಮಾ ಯೋಜನೆಯಿಂದಾಗಿ ರೈತರಿಗೆ ಅನುಕೂಲ. ರೈತ ಸಮುದಾಯಕ್ಕೆ 90 ಸಾವಿರ ಕೋಟಿ ನೀಡಲಾಗಿದೆ. ರೈತರ ಖಾತೆಗೆ ನೇರ ಹಣ ವರ್ಗಾವಣೆಯಾಗುತ್ತಿದೆ. ಈವರೆಗೆ 10 ಕೋಟಿ ರೈತರಿಗೆ ಹಣ ನೀಡಲಾಗಿದೆ ಎಂದರು.