ಕೇಂದ್ರ ಚುನಾವಣಾ ಆಯೋಗ ಇಂದು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಬಸವಕಲ್ಯಾಣ, ಮಸ್ಕಿ, ಸಿಂಧಗಿ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೂ ದಿನಾಂಕ ಘೋಷಣೆಯಾಗಲಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಚುನಾವಣಾ ದಿನಾಂಕದ ಕುರಿತು ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಸಿಇಸಿ ಸುನೀಲ್ ಅರೋರಾ, ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು, ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಯಲಿದ್ದು ಮಾರ್ಚ್ 27 ಮೊದಲ ಹಂತದ ಮತದಾನ, ಏಪ್ರಿಲ್ 1 ಎರಡನೇ ಹಂತದ ಮತದಾನ, ಏಪ್ರಿಲ್ 6 ರಂದು ಮೂರನೇ ಹಂತದ ಮತದಾನ ಏಪ್ರಿಲ್ 10 ರಂದು ನಾಲ್ಕನೇ ಹಂತದ ಮತದಾನ ಏಪ್ರಿಲ್ 17 ಐದನೇ ಹಂತದ ಮತದಾನ, ಏಪ್ರಿಲ್ 22 ಆರನೇ ಹಂತದ ಮತದಾನ, ಏಪ್ರಿಲ್ 26 ಏಳನೇ ಹಂತದ ಮತದಾನ, ಏಪ್ರಿಲ್ 29 ರಂದು ಎಂಟನೇ ಹಂತದ ಮತದಾನ ನಡೆಯಲಿದೆ. ಪುದುಚೆರಿಯಲ್ಲಿ ಏಪ್ರಿಲ್ 6 ರಂದು, ಕೇರಳದಲ್ಲಿ ಏಪ್ರಿಲ್ 6 ರಂದು ಹಾಗೂ ಅಸ್ಸಾಂನಲ್ಲಿ 3 ಹಂತದ ಮತದಾನ ನಡೆಯಲಿದ್ದು, ಮಾರ್ಚ್ 27 ಕ್ಕೆ ಮೊದಲ ಹಂತದ ಮತದಾನ, ಏಪ್ರಿಲ್ 1 ಎರಡನೇ ಹಂತದ ಮತದಾನ, ಏಪ್ರಿಲ್ 6 ರಂದು ಮೂರನೇ ಹಂತದ ಮತದಾನ ನಡೆಯಲಿದೆ ಎಂದು ತಿಳಿಸಿದರು. ಮೇ 2 ರಂದು ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಿಸಲಾಗುವುದು.
ಇನ್ನು ಕರ್ನಾಟಕದ ಬಸವಕಲ್ಯಾಣ, ಮಸ್ಕಿ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ಘೋಷಿಸಲಾಗುವುದು.
ಸತತ ಗೆಲುವುಗಳಿಂದ ಬೀಗುತ್ತಿದ್ದ ಆಡಳಿತಾರೂಢ ಬಿಜೆಪಿಗೆ ಈ ಚುನಾವಣೆ ಆಗ್ನಿ ಪರೀಕ್ಷೆಯಾಗಿದ್ದು, ರೈತ ಚಳವಳಿ, ಪೆಟ್ರೋಲ್ – ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ಮುಗಿಲು ಮುಟ್ಟಿರುವುದರಿಂದ ಈ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.