ರಿಲಾಯನ್ಸ್ ಸಮೂಹದ ಶತಕೋಟ್ಯಾಧಿಪತಿ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿರನ್ನು ಬನಾರಸ್ ಹಿಂದೂ ವಿವಿಗೆ (ಬಿಎಚ್‌ಯು) ವಿಸಿಟಿಂಗ್ ಪ್ರಾಧ್ಯಾಪಕರನ್ನಾಗಿ ನೇಮಿಸುವ ನಿರ್ಣಯವೊಂದಕ್ಕೆ ಭಾರೀ ವಿರೋಧ ಕೇಳಿ ಬಂದಿದೆ.
40 ವಿದ್ಯಾರ್ಥಿಗಳ ಸಮೂಹ ಬುಧವಾರದಂದು ವಿವಿಯ ಉಪಕುಲಪತಿ ರಾಕೇಶ್ ಭಟ್ನಾಗರ್ ನಿವಾಸದ ಎದುರು ನೆರೆದು ಈ ಸಂಬಂಧ ಮನವಿಯೊಂದನ್ನು ಕೊಟ್ಟಿದ್ದಾರೆ.
ವಿವಿಯ ಸಮಾಜ ಶಾಸ್ತ್ರ ವಿಭಾಗವು ರಿಲಾಯನ್ಸ್ ಪ್ರತಿಷ್ಟಾನದ ನೀತಾ ಅಂಬಾನಿಗೆ ತಮ್ಮ ಮಹಿಳಾ ಅಧ್ಯಯನ ಕೇಂದ್ರದಲ್ಲಿ ವಿಸಿಟಿಂಗ್ ಪ್ರಾಧ್ಯಾಪಕರಾಗಲು ಆಹ್ವಾನ ಕೋರಿ ಆಮಂತ್ರಣ ಕಳುಹಿಸಿತ್ತು. ಪ್ರಸ್ತಾವನೆಯನ್ನು ನೀತಾಗೆ ಮಾತ್ರ ಕಳುಹಿಸಲಾಗಿದೆ. ಆದರೆ ಇದಕ್ಕೂ ಮುನ್ನ ಮತ್ತೊಬ್ಬ ಉದ್ಯಮಿ ಗೌತಮ್ ಅದಾನಿಯವರ ಪತ್ನಿ ಪ್ರೀತಿ ಅದಾನಿ ಹಾಗೂ ಬ್ರಿಟನ್‌ನಲ್ಲಿರುವ ಉದ್ಯಮಿ ಲಕ್ಷ್ಮಿ ಮಿತ್ತಲ್ ಮಡದಿ ಉಷಾ ಮಿತ್ತಲ್‌ಗೂ ಆಮಂತ್ರಣ ಕಳುಹಿಸುವ ಚಿಂತನೆ ಮಾಡಲಾಗಿತ್ತಂತೆ.
ಗ್ರಾಹಕರೇ ಗಮನಿಸಿ: ‘ಫೋನ್’ ವಂಚನೆಗಳಿಗೆ ಬ್ಯಾಂಕ್ ಜವಾಬ್ದಾರಿಯಲ್ಲ..!
“ಶ್ರೀಮಂತ ವ್ಯಕ್ತಿಯೊಬ್ಬರ ಪತ್ನಿ ಎಂಬುದು ಯಾವ ಸಾಧನೆಯೂ ಅಲ್ಲ. ಇವರೆಲ್ಲ ನಮಗೆ ಸ್ಪೂರ್ತಿ ತರುವ ವ್ಯಕ್ತಿಗಳಲ್ಲ. ನೀವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದಾದರೆ, ಅರುಣಿಮಾ ಸಿನ್ಹಾ, ಬಚೆಂದ್ರಿ ಪಾಲ್, ಮೇರಿ ಕೋಮ್, ಕಿರಣ್ ಬೇಡಿ ಅವರಂಥವರನ್ನು ಆಹ್ವಾನಿಸಿ” ಎಂದು ಸಂಶೋಧನಾ ವಿದ್ಯಾರ್ಥಿ ಶುಭಮ್ ತಿವಾರಿ ಪ್ರತಿಭಟನೆ ವೇಳೆ ಆಗ್ರಹಿಸಿದ್ದಾರೆ.
ನೀತಾ ಅಂಬಾನಿಗೆ ಈ ರೀತಿಯ ಆಮಂತ್ರಣ ಕೊಟ್ಟಿರುವುದು ತಮಗೆ ಗೊತ್ತೇ ಇಲ್ಲವೆಂದು ಉಪ ಕುಲಪತಿ ಭಟ್ನಾಗರ್ ತಿಳಿಸಿದ್ದಾರೆ.