ಕೊರೋನಾ ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಯಮವೇನೋ ಇದೆ. ಆದರದು ಹೇಗೆ ಸಾಧ್ಯ ? ಇಲ್ಲಿದೆ ನೋಡಿ ಆ ಪ್ರಶ್ನೆಗೆ ಉತ್ತರ.
ಇತ್ತೀಚೆಗೆ ಅಂಫಾನ್ ಚಂಡಮಾರುತ ಅಪ್ಪಳಿಸಿದ ಪಶ್ಚಿಮ ಬಂಗಾಳದ ನೆಲದಲ್ಲಿ ಬರೋಬ್ಬರಿ 1500 ಅಡಿ ಉದ್ದದ ಚಿತ್ರಕಲೆಗಳು ಅರಳಿ ನಿಂತಿವೆ.
ಹೌದು, ವಿಬ್ರಿಡ್ಜ್ ಎಂಬ ಯುವ ವಿನ್ಯಾಸಗಾರರು ಹಾಗೂ ವಾಸ್ತುಶಿಲ್ಪಕಾರರ ತಂಡವು ಬಂಗಾಳದ ಬೀದಿಯಲ್ಲಿ ಚಿತ್ರಕಲೆಯ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.
ಕೇವಲ ಎರಡೇ ದಿನದಲ್ಲಿ 30 ಮಂದಿ ಸೇರಿ ಈ ಕೆಲಸ ಮಾಡಿದ್ದು, ದಾರಿಯಲ್ಲಿ ನಡೆದು ಹೋಗುವ ಪ್ರತಿಯೊಬ್ಬರಿಗೂ ಅಂತರದ ಬಗ್ಗೆ ಅರ್ಥ ಮಾಡಿಸುವಂತಿದೆ.
ಇದರೊಂದಿಗೆ ಇಲ್ಲಿನ ಸುಕಂತ ಸ್ಪೋರ್ಟ್ಸ್ ಕ್ಲಬ್ ಕೂಡ ಕೈ ಜೋಡಿಸಿದ್ದು, ಭಾರೀ ವಿಜೃಂಭಣೆಯಿಂದ ನಡೆಯುವ ದುರ್ಗಾ ಪೂಜೆಗೂ ಇದೇ ಮಾದರಿಯ ಅರಿವು ಮೂಡಿಸಲು ಯೋಜನೆ ರೂಪಿಸಿವೆ.
ಇದಕ್ಕಾಗಿ ಮಹಾಭಾರತ ಕಾಲದ ಚಕ್ರವ್ಯೂಹವನ್ನ ಕಲ್ಪನೆಯಾಗಿ ಇಟ್ಟುಕೊಂಡು, ರಸ್ತೆ ನಡುವಿನ ವೃತ್ತದಿಂದ ಹಿಡಿದು ದುರ್ಗಾ ಪೂಜೆಯ ಪೆಂಡಾಲ್ ವರೆಗೆ ಚಕ್ರವ್ಯೂಹದ ಮಾದರಿಯ ಚಿತ್ರ ಮೂಡಲಿದೆ. ರಸ್ತೆಯ ಒಂದು ಬದಿಯಲ್ಲಿ 6 ಅಡಿ ಅಗಲ, ಮತ್ತೊಂದು ಬದಿಯಲ್ಲಿ 4 ಅಡಿ ಅಗಲದ ಚಿತ್ತಾರಗಳು ಒಡಮೂಡಲಿದ್ದು, ಅಲ್ಲಿಗೆ ತಲುಪಬೇಕಾದ ಸರದಿ ಸಾಲನ್ನು ಗುರುತಿಸಿ ಪರಸ್ಪರ 1 ಮೀಟರ್ ಅಂತರ ಇರುವಂತೆ ಚಿತ್ರಿಸಲಾಗುತ್ತದೆ. ಎಲ್ಲರೂ ಅದನ್ನು ಅನುಸರಿಸಬೇಕು.
ಅಭಿಮನ್ಯುವಿಗೆ ಚಕ್ರವ್ಯೂಹದ ಒಳಗೆ ಹೋಗುವುದು ಗೊತ್ತಿತ್ತೇ ಹೊರತು, ಹೊರಗೆ ಬರುವುದು ಗೊತ್ತಿರಲಿಲ್ಲ. ಕೊರೋನಾ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳದಿದ್ದರೆ ನಾವು ಕೂಡ ಹಾಗೇ ಅಲ್ಲವೇ?