ಬಂಗಾಳದ ಜನಪ್ರಿಯ ಸಿಹಿ ತಿನಿಸಾದ ಜೋಯ್‌ನಾಗೆರರ್ ಮೋವಾ ಭೌಗೋಳಿಕ ಸೂಚಕದ ಟ್ಯಾಗ್ ಇರುವ ಖಾದ್ಯವಾಗಿದೆ. ಆದರೆ ಈ ಸಿಹಿ ತಿನಿಸಿಗೆ ಆಧುನಿಕ ಪ್ಯಾಕೇಜಿಂಗ್ ಮಾಡಲು ಮೂಲ ಸೌಕರ್ಯ ಅಭಿವೃದ್ಧಿ ಪಡಿಸುತ್ತಿರುವ ಕಾರಣ ಇದೀಗ ಬೇರೆ ರಾಜ್ಯಗಳಿಗೆ ರಫ್ತು ಮಾಡುವುದರಲ್ಲಿ ವಿಳಂಬವಾಗಿತ್ತಿದೆ.
ಪಶ್ಚಿಮ ಬಂಗಾಳದ ದಕ್ಷಿಣದ 24 ಪರಗಣ ಜಿಲ್ಲೆಯ ಜೊಯ್‌ನಗರದಲ್ಲಿ ಈ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಖರ್ಜೂರದ ಬೆಲ್ಲ ಹಾಗೂ ವಿಶೇಷವಾದ ಕಂಕಾಚೂರ್ ಖೋಯ್ ಎಂಬ ವಿಧದ ಮಂಡಕ್ಕಿಯೊಂದನ್ನು ಬೆರೆಸಿ ಈ ಸಿಹಿ ತಿನಿಸನ್ನು ತಯಾರಿಸಲಾಗುತ್ತದೆ.
ಈ ಸಿಹಿ ತಿನಿಸಿಗೆ ಚಳಿಗಾಲದಲ್ಲಿ ಭಾರೀ ಬೇಡಿಕೆ ಇದೆ. ಆದರೆ ಈ ಖಾದ್ಯದ ಆಯುಷ್ಯ ಕೇವಲ 5 ದಿನಗಳು ಮಾತ್ರವೇ ಇರುವ ಕಾರಣ ದೇಶದ ಅನ್ಯ ರಾಜ್ಯಗಳಿಗೆ ರಫ್ತು ಮಾಡುವುದು ಕಷ್ಟ. ಆಧುನಿಕ ಪ್ಯಾಕೇಜಿಂಗ್ ಮುಖಾಂತರ ಈ ಆಯುಷ್ಯವನ್ನು ಕನಿಷ್ಠ 25 ದಿನಗಳ ಮಟ್ಟಿಗೆ ಹೆಚ್ಚಿಸಿ, ದೇಶದ ನಾನಾ ಮೂಲೆಗಳಿಗೆ ರಫ್ತು ಮಾಡಲು ಬಂಗಾಳ ಖಾದಿ ಹಾಗೂ ಗ್ರಾಮ ಕೈಗಾರಿಕೆ ಮಂಡಳಿ ಕ್ರಮಗಳನ್ನು ತೆಗೆದುಕೊಂಡಿದೆ.