ಕೇರಳದ ಕಣ್ಣೂರು ಮೂಲದ ಬೀಡಿ ಕೆಲಸಗಾರರೊಬ್ಬರು ರಾಜ್ಯದಲ್ಲಿ ಯಾರಿಗೂ ಲಸಿಕೆಗೆ ಅಭಾವ ಉಂಟಾಗಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 2 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ಮೊತ್ತವನ್ನ ನೀಡಿದ ಬೀಡಿ ಕೆಲಸಗಾರ ತನ್ನ ಹೆಸರನ್ನ ಬಹಿರಂಗಪಡಿಸಿಲ್ಲ. ಈ ದೇಣಿಗೆ ಬಳಿಕ ಅವರ ಬ್ಯಾಂಕ್ನಲ್ಲಿ ಉಳಿದಿರೋದು ಕೇವಲ 850 ರೂಪಾಯಿಗಳಂತೆ..!
ಈ ಒಂದು ಹೃದಯಸ್ಪರ್ಶಿ ಘಟನೆ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಜನರ ಪ್ರತಿಕ್ರಿಯೆಗೆ ನಾವು ಆಭಾರಿಯಾಗಿದ್ದೇವೆ ಎಂದು ಅವರು ಟ್ವೀಟಾಯಿಸಿದ್ದಾರೆ.
ಬೀಡಿ ಕಾರ್ಮಿಕನ ಈ ಉದಾರ ಬುದ್ಧಿಯನ್ನ ಕಂಡು ಆಶ್ಚರ್ಯಚಕಿತರಾದ ಬ್ಯಾಂಕ್ ಸಿಬ್ಬಂದಿಯೊಬ್ಬರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಯೋಚಿಸುವಂತೆ ಸಲಹೆ ನೀಡಿದ್ದರು. ಆದರೆ ಬೀಡಿ ಕಾರ್ಮಿಕ ಮಾತ್ರ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಗೊಂದಲ ಹೊಂದಿರಲಿಲ್ಲ. ಅಲ್ಲದೇ ಸಿಎಂ ನಿಧಿಗೆ ಈ ಹಣವನ್ನ ವರ್ಗಾವಣೆ ಮಾಡುವ ವೇಳೆ ಎಲ್ಲಿಯೂ ನನ್ನ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಿ ಎಂತಲೂ ಹೇಳಿದ್ದರಂತೆ.
ಈ ಮಹಾನುಭಾವ ಬೀಡಿ ಕೆಲಸದ ಮೂಲಕ ಹಣ ಗಳಿಸೋದು ಮಾತ್ರವಲ್ಲದೇ ಅಂಗವೈಕಲ್ಯ ಪಿಂಚಣಿಗೂ ಅರ್ಹರಾಗಿದ್ದಾರೆ. ಹೀಗಾಗಿ ನನ್ನ ಖಾತೆಯಿಂದ ಹಣ ಖಾಲಿಯಾಗಿದ್ದಕ್ಕೆ ಯಾವುದೇ ಬೇಸರವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಜೊತೆ ಹೇಳಿಕೊಂಡಿದ್ದರಂತೆ.
ಇನ್ನು ಈ ಕುರಿತು ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ವ್ಯಕ್ತಿ ಹಣಕ್ಕಿಂತ ಮನುಷ್ಯ ಜೀವನ ದೊಡ್ಡದು ಎಂಬ ಸಂದೇಶ ಸಾರಿದ್ದಾರೆ ಎಂದು ಹೇಳಿದ್ರು.