ಕೋವಿಡ್ 19 ಪಾಸಿಟಿವ್ ಹೊಂದಿದ ಗರ್ಭಿಣಿಯರಿಗೆ ಜನಿಸಿದ ಶಿಶುಗಳು ರೋಗಲಕ್ಷಣ ಬೆಳೆಯುವ ಅಪಾಯವನ್ನ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಜಮಾ ನೆಟ್ವರ್ಕ್ ಓಪನ್ ಜರ್ನಲ್ ನಡೆಸಿದ ಅಧ್ಯಯನದಲ್ಲಿ ಕೋವಿಡ್ ಸೋಂಕನ್ನ ಹೊಂದಿದ್ದ 95 ಪ್ರತಿಶತ ಮಹಿಳೆಯಲ್ಲಿ ಯಾವುದೇ ಗಂಭೀರ ಪರಿಣಾಮ ಹೊಂದಿರಲಿಲ್ಲ ಎಂದು ಹೇಳಿದೆ.
ಕೇವಲ 3 ಶೇಕಡಾ ಪ್ರಕರಣಗಳಲ್ಲಿ ಮಾತ್ರ ಕೊರೊನಾ ಭ್ರೂಣಕ್ಕೆ ಹರಡಿದೆ ಎಂದು ಅಧ್ಯಯನ ಕಂಡು ಹಿಡಿದಿದೆ. ಕೊರೊನಾ ಲಕ್ಷಣಗಳಿರದ ಅಥವಾ ಸೌಮ್ಯ ಲಕ್ಷಣಗಳನ್ನ ಹೊಂದಿರುವ ಗರ್ಭಿಣಿಯರಲ್ಲಿ ಹೆಚ್ಚಿನವರ ಶಿಶುಗಳು ವೈರಸ್ ದಾಳಿಗೆ ಒಳಗಾಗುವುದಿಲ್ಲ ಎಂದು ಅಧ್ಯಯನ ಹೇಳಿದೆ.
ಕೊರೊನಾ ಅವಧಿಯಲ್ಲಿ ಗರ್ಭಿಣಿಯರಾಗಿದ್ದ 3374 ಮಂದಿ ಮಹಿಳೆಯರಲ್ಲಿ 252 ಮಂದಿ ಗರ್ಭಾವಸ್ಥೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ 252 ಮಂದಿ ಗರ್ಭಿಣಿಯರಲ್ಲಿ ಶೇಕಡಾ 95ರಷ್ಟು ಮಂದಿ ಸೋಂಕಿತರು ರೋಗಲಕ್ಷಣವೇ ಇಲ್ಲದ ಅಥವಾ ಕಡಿಮೆ ರೋಗಲಕ್ಷಣ ಹೊಂದಿದ್ದರು. ಈ ಮಹಿಳೆಯರಲ್ಲಿ ಕೇವಲ ಆರು ಮಂದಿ ಮಾತ್ರ ತೀವ್ರವಾದ ಲಕ್ಷಣಗಳಿಂದ ಬಳಲಿದ್ದಾರೆ.
ಸೋಂಕಿಗೆ ಒಳಗಾದ ಗರ್ಭಿಣಿಯರು ಹಾಗೂ ಸಾಮಾನ್ಯ ಗರ್ಭಿಣಿಯರಲ್ಲಿ ಅಂತಹ ವ್ಯತ್ಯಾಸವೇನು ಕಂಡುಬಂದಿಲ್ಲ. ಸೋಂಕಿತ ಮಹಿಳೆಯರು ಹೆಚ್ಚಾಗಿ ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದಾರೆ, ಆದರೆ ಮಧುಮೇಹ ಅಥವಾ ಬೇರೆ ಯಾವುದಾದರೂ ನಿರ್ಣಾಯಕ ಕಾಯಿಲೆ ಹೊಂದಿರುವ ಗರ್ಭಿಣಿಯರಿಗೆ ಮಾತ್ರ ಸೋಂಕು ಅಪಾಯ ಹೆಚ್ಚಿಸುವ ಒಂದು ಅಂಶವಾಗಿದೆ ಎಂಬುದನ್ನ ಅಧ್ಯಯನ ಕಂಡುಹಿಡಿದಿದೆ.
ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ತಾಯಂದಿರಿಗೆ ಹಾಗೂ ಶಿಶುಗಳ ಆರೋಗ್ಯದ ಮೇಲೆ ಈ ಸೋಂಕು ಭವಿಷ್ಯದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಅನ್ನೋ ವಿಚಾರವಾಗಿ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಅಂತಾ ಸಂಶೋಧಕರು ಹೇಳಿದ್ದಾರೆ.