ನವದೆಹಲಿ: ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆ ಸೌಲಭ್ಯವನ್ನು ಬಡವರಲ್ಲದವರಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ದೇಶದ 10 ಕೋಟಿ ಬಡಕುಟುಂಬದ 53 ಕೋಟಿ ಜನ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಡವರನ್ನು ಹೊರತುಪಡಿಸಿದಂತೆ ಮಧ್ಯಮವರ್ಗ ಮತ್ತು ಬಡವರ ನಡುವಿನ ವರ್ಗವನ್ನು ಗುರುತಿಸಿ ಅವರಿಗೆ ಆಯುಷ್ಮಾನ್ ಯೋಜನೆ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದಿ ಮಿಸ್ಸಿಂಗ್ ಮಿಡಲ್ ವರ್ಗವನ್ನು ಗುರುತಿಸಿ ಸೌಲಭ್ಯ ನೀಡಲಾಗುವುದು.
ಎಂಎಸ್ಎಂಇ ವಲಯದ ನೌಕರರು, ಸ್ವಂತ ಉದ್ಯೋಗಗಳು, ವೃತ್ತಿಪರರು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ, ಸರ್ಕಾರಿ ಮತ್ತು ಗುತ್ತಿಗೆ ಸಿಬ್ಬಂದಿ, ಅನೌಪಚಾರಿಕ ವಲಯದ ಕಾರ್ಮಿಕರನ್ನು ಮಿಸ್ಸಿಂಗ್ ಮಿಡಲ್ ಎಂದು ಗುರುತಿಸಲಾಗಿದೆ. ಆಯುಷ್ಮಾನ್ ಯೋಜನೆಯಡಿ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ವಿಮೆ ಸೌಲಭ್ಯ ಸಿಗುತ್ತದೆ. ಆರಂಭಿಕ ಹಂತದಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ನಂತರ ಹಂತಹಂತವಾಗಿ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.