ನವದೆಹಲಿ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬುಧವಾರ ಸಂಜೆ ಅವರು ಟ್ವಿಟರ್ನಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದು ಸೋಂಕಿನ ಲಕ್ಷಣವಿಲ್ಲದೆ ಕೊರೋನಾ ಪಾಸಿಟಿವ್ ವರದಿ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಆಯುಷ್(ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಸಚಿವಾಲಯದ ಮುಖ್ಯಸ್ಥರಾದ ಶ್ರೀಪಾದ್ ನಾಯಕ್ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.
ತಮಗೆ ಕೋವಿಡ್ ಟೆಸ್ಟ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಅವರು ತಿಳಿಸಿದ್ದು, ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಶ್ರೀಪಾದ್ ನಾಯಕ್ ಅವರು ಕೋವಿಡ್ ಪಾಸಿಟಿವ್ ವರದಿ ಬಂದ 5ನೇ ಕೇಂದ್ರ ಸಚಿವರಾಗಿದ್ದಾರೆ. ಗೃಹಸಚಿವ ಅಮಿತ್ ಶಾ, ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಕೈಗಾರಿಕೆ ಸಚಿವ ಅರ್ಜುನ್ ರಾಮ್ ಮೇಘವಾಲ್, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಕೈಲಾಶ್ ಚೌಧರಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮುಖ್ಯಮಂತ್ರಿಗಳಲ್ಲಿ ಕರ್ನಾಟಕ ಸಿಎಂ ಯಡಿಯೂರಪ್ಪ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕೊರೋನಾ ಸೋಂಕು ತಗುಲಿದ್ದು, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.