
ರಾಮಮಂದಿರ ನಿರ್ಮಾಣವಾಗದೆ ಅಯೋಧ್ಯೆ ನಗರಕ್ಕೆ ಬರಲಾರೆ ಎಂದು 1992 ರಲ್ಲಿ ಮೋದಿ ಹೇಳಿದ್ದರು. ಅಂತೆಯೇ 28 ವರ್ಷಗಳ ನಂತರ ಅವರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿ ರದ್ದುಗೊಳಿಸಲು ಆಗ್ರಹಿಸಿ ಬಿಜೆಪಿ ನಾಯಕರು 28 ವರ್ಷಗಳ ಹಿಂದೆ ತಿರಂಗಾ ಯಾತ್ರೆ ಕೈಗೊಂಡಿದ್ದು ಯಾತ್ರೆಯ ಸಂಚಾಲಕರಾಗಿದ್ದ ಮೋದಿ ಅಯೋಧ್ಯೆಗೆ ಆಗಮಿಸಿದ್ದರು.
ಅದಾಗಿ 28 ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿ ರದ್ದು ಗೊಳಿಸಲಾಗಿತ್ತು. ಈ ಆಗಸ್ಟ್ 5ರಂದು ಅದೇ ದಿನ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. 28 ವರ್ಷಗಳ ನಂತರ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು 2019 ರ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಅಯೋಧ್ಯೆಯಿಂದ 34 ಕಿಲೋಮೀಟರ್ ದೂರದಲ್ಲಿ ನಡೆದ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಭರವಸೆ ನೀಡಿತ್ತು.