ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಬೆನ್ನಲ್ಲೇ ಈ ಬಾರಿ ಪವಿತ್ರ ಸ್ಥಳದಲ್ಲಿ ದೀಪಾವಳಿ ಆಚರಣೆಗೂ ನಿರ್ಧರಿಸಲಾಗಿದೆ. 1992ರ ಬಳಿಕ ಇದೇ ಮೊದಲ ಬಾರಿಗೆ ರಾಮ ಜನ್ಮ ಸ್ಥಳದಲ್ಲಿ ದೀಪಾವಳಿ ಆಚರಣೆ ರಂಗೇರಲಿದೆ.
ರಾಮ ಜನ್ಮ ಭೂಮಿ – ಬಾಬರಿ ಮಸೀದಿ ವಿವಾದ ಪ್ರಕರಣದ ತೀರ್ಪಿಗೂ ಮುನ್ನ ವಿವಾದಿತ ಸ್ಥಳದಲ್ಲಿ ಯಾವುದೇ ಆಚರಣೆಗೆ ಅವಕಾಶವಿರಲಿಲ್ಲ. ಇದೀಗ ಸುಪ್ರಿಂ ಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆ ಅಯೋಧ್ಯೆಯಲ್ಲಿ ಸಂಭ್ರಮದ ದೀಪಾವಳಿ ಜರುಗಲಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೀಪಾವಳಿ ಉತ್ಸವವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹಬ್ಬದ ದಿನ ದೇವಾಲಯದ ಪ್ರಾಂಗಣದ ಸುತ್ತ ಲಕ್ಷಾಂತರ ದೀಪಗಳು ಉರಿಯಲಿವೆ. ಸರಯೂ ನದಿ ದಡದಲ್ಲೂ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಅಯೋಧ್ಯೆಯಲ್ಲಿ 5 ಲಕ್ಷ ದೀಪಗಳನ್ನ ಉರಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡಲಾಗಿತ್ತು. ಈ ಬಾರಿ ಇದಕ್ಕೂ ಹೆಚ್ಚಿನ ದೀಪಗಳನ್ನ ಬೆಳಗಿಸಲು ಯೋಗಿ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಮತ್ತೊಂದು ವಿಶ್ವದಾಖಲೆ ಸೃಷ್ಟಿಯಾಗಲಿದೆ ಅಂತಾ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.