ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಖುದ್ದು ಮುಂದೆ ಬಂದು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅನ್ಸಾರಿ, ದೇಗುಲ ನಿರ್ಮಾಣಕ್ಕೆ ಖುದ್ದು ತಾವೂ ಸಹ ದೇಣಿಗೆ ನೀಡಲಿದ್ದು, ಇತರರಿಗೂ ಸಹ ನೀಡುವಂತೆ ಕೋರುವುದಾಗಿ ಹೇಳಿದ್ದಾರೆ. ಕೋಮು ಸೌಹಾರ್ದತೆ ಮೂಡಿಸಲು ಇಂಥ ಧಾರ್ಮಿಕ ಉದ್ದೇಶಗಳ ಪರವಾಗಿ ನಿಲ್ಲುವುದರಲ್ಲಿ ತಪ್ಪೇನಿಲ್ಲ ಎಂದು ಅನ್ಸಾರಿ ಹೇಳಿದ್ದಾರೆ.
ದೇಶ-ವಿದೇಶಗಳಲ್ಲಿ ಇರುವ ಕೋಟ್ಯಂತರ ರಾಮ ಭಕ್ತರ ದೇಣಿಗೆಯ ನೆರವಿನಿಂದ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಿದೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಲು ಜನರು ತಂತಮ್ಮ ಆರ್ಥಿಕ ಚೇತನಕ್ಕೆ ಅನುಗುಣವಾಗಿ 10 ರೂಪಾಯಿ, 100 ರೂ, 1000ರೂ.ಗಳ ವಿವಿಧ ಮುಖಬೆಲೆಯ ದೇಣಿಗೆಗಳನ್ನು ಕೊಡಬಹುದಾಗಿದೆ.
ಮನೆ ಮನೆ ಬಾಗಿಲಿಗೆ ತೆರಳಿ ದೇಣಿಗೆ ಸಂಗ್ರಹ ಮಾಡಲೆಂದು ವಿಶ್ವ ಹಿಂದೂ ಪರಿಷತ್ ಐದು ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಂಡಿದ್ದು, ಈ ಕಾರ್ಯಕ್ರಮವು ಜನವರಿ 15ರಿಂದ ಫೆಬ್ರವರಿ 27ರವರೆಗೂ ಜರುಗಲಿದೆ. ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಐದು ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ.