ಘಾಜಿಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ನೈನಿತಾಲ್ನ ಸಹೋದರಿಯರಿಬ್ಬರು ಪ್ರತಿಭಟನಾ ಸ್ಥಳದಲ್ಲಿ ಕಿಸಾನ್ ಮಹಿಳಾ ಸ್ಟೋರ್ ಒಂದನ್ನ ಸ್ಥಾಪಿಸಿದ್ದಾರೆ. ಈ ಸ್ಥಳದಲ್ಲಿ ಈಗಾಗಲೇ 1 ಸಾವಿರಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ. ಗಣರಾಜ್ಯೋತ್ಸವದಂದು ಇನ್ನಷ್ಟು ಮಹಿಳೆಯರು ಪ್ರತಿಭಟನಾ ಸ್ಥಳದಲ್ಲಿ ಸೇರುವ ನಿರೀಕ್ಷೆಯಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅಂಗಡಿ ಮಾಲೀಕೆ ಗುಶರಂಜನ್ಜೀತ್ ಕೌರ್, ನಾವು ಡಿಸೆಂಬರ್ 25ರಂದು ಪ್ರತಿಭಟನಾ ಸ್ಥಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದೆವು. ಈ ವೇಳೆ ಇಲ್ಲಿ ಅನೇಕ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಸೇರಿದಂತೆ ಅವಶ್ಯ ವಸ್ತುಗಳಿಗಾಗಿ ಕಷ್ಟ ಪಡ್ತಿರೋದನ್ನ ನೋಡಿದೆವು. ಹೀಗಾಗಿ ನಮಗೆ ಇಲ್ಲೊಂದು ಅಂಗಡಿ ಸ್ಥಾಪಿಸುವ ಯೋಜನೆ ಹೊಳೀತು ಅಂತಾ ಹೇಳಿದ್ರು.
ಸ್ನೇಹಿತರು ಹಾಗೂ ಸಹೋದರರ ನೆರವಿನಿಂದ ಹರ್ಷರಂಜೀತ್ ಕೌರ್ ಹಾಗೂ ಗುಶ್ರಂಜನ್ ಕೌರ್ ಈ ಅಂಗಡಿಯನ್ನ ಸ್ಥಾಪಿಸಿದ್ದಾರೆ. ಹಿರಿಯ ಸಹೋದರಿ ಹರ್ಷರಂಜಿತ್ ಕೌರ್ ಕೂಡ ಈ ವಿಚಾರವಾಗಿ ಮಾತನಾಡಿ, ನಾವು ಈ ಟೆಂಟ್ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದೇವೆ. ಅಲ್ಲದೇ ಇಲ್ಲಿ ಸಿಕ್ಕಾಪಟ್ಟೆ ಸೊಳ್ಳೆ ಕಾಟ ಕೂಡ ಇದೆ. ಇಲ್ಲಿ ಮಹಿಳೆಯರು ಶೌಚಕ್ಕೆ ಬಹಳ ದೂರದವರೆಗೆ ಸಾಗಬೇಕಾಗಿದೆ. ಹೀಗಾಗಿ ನಾವು ಚಲಿಸುವ ಶೌಚಾಲಯಕ್ಕೂ ವ್ಯವಸ್ಥೆ ಮಾಡಿದ್ದೇವೆ. ಟೆಂಟ್ನಲ್ಲಿ 80ಕ್ಕೂ ಹೆಚ್ಚಿನ ಮಹಿಳೆಯರು ಉಳಿದುಕೊಳ್ಳಲು ಅನುಕೂಲವಾಗುವಂತೆ ಟೆಂಟ್ ಕೂಡ ನಿರ್ಮಿಸಿದ್ದೇವೆ ಎಂದು ಹೇಳಿದ್ರು.
ಇವರ ಅಂಗಡಿಯಲ್ಲಿ ಸ್ಯಾನಿಟರಿ ಪ್ಯಾಡ್, ಒಳ ಉಡುಪುಗಳು, ಶ್ಯಾಂಪೂ, ಸಾಬೂನು, ಟೂತ್ಪೇಸ್ಟ್ ಹಾಗೂ ಟವೆಲ್ಗಳು ಲಭ್ಯವಿದೆ. ಈ ಅಂಗಡಿಯಲ್ಲಿ ಸ್ಯಾನಿಟರಿ ಪ್ಯಾಡ್ ಹಾಗೂ ಟವೆಲ್ಗಳನ್ನ ಪಡೆದು ಮಾತನಾಡಿದ ರೈತ ಮಹಿಳೆ ನನ್ನಿ ದೇವಿ, ಈ ಅಂಗಡಿ ಆರಂಭವಾದ ಬಳಿಕ ನಮಗೆ ತುಂಬಾನೇ ಅನುಕೂಲವಾಗಿದೆ ಎಂದು ಹೇಳಿದ್ರು.