ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು.
ಸದಾ ಮನೆ, ಸಮಾಜದ ಜತೆ ಇರುವವರು ಯಾರನ್ನೂ ಭೇಟಿಯಾಗದೇ 14 ದಿನ ಕಳೆಯುವುದು ಕೆಲವರಿಗೆ ಭಾರಿ ಬೇಸರದ ವಿಷಯ. ಇತ್ತೀಚೆಗೆ ಕ್ವಾರಂಟೈನ್ ಕೇಂದ್ರಗಳೂ ಸಾಕಷ್ಟು ಜನರಿಂದ ತುಂಬಿಕೊಳ್ಳುತ್ತಿವೆ.
ಅಲ್ಲಿ ದಿನ ಕಳೆಯಲು ಈಗ ಜನ ಹಾಡು, ನೃತ್ಯ, ಆಟ ಮುಂತಾದವುಗಳನ್ನು ಮಾಡುತ್ತಿದ್ದಾರೆ. ಬಿಹಾರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ 1967 ರ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾನೆ. ದೋತ್ರ ಉಟ್ಟು ಬನಿಯನ್ ಹಾಕಿದ ವ್ಯಕ್ತಿ “ಏಕ್ ಚತುರ ನಾರ ಬಲು ಹೋಶಿಯಾರ” ಹಾಡಿಗೆ ತುಂಬ ಸುಂದರವಾಗಿ ನೃತ್ಯ ಮಾಡಿದ್ದಾರೆ. ಬಾಲಿವುಡ್ ನಟ ಮೆಹಮೂದ್ ಅವರ ಹಾವ, ಭಾವಗಳನ್ನು ಪಾಲನೆ ಮಾಡಿದ್ದಾರೆ. ವೃತ್ತಿನಿರತ ಶಾಸ್ತ್ರೀಯ ನೃತ್ಯಗಾರನಂತೆ ನರ್ತಿಸಿ, ಕೇಂದ್ರದಲ್ಲಿದ್ದ ಜನರ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿದ್ದಾರೆ. 5 ನಿಮಿಷ 5 ಸೆಕೆಂಡ್ ನ ವಿಡಿಯೋ ಇದಾಗಿದ್ದು, ಯುಟ್ಯೂಬ್, ಫೇಸ್ ಬುಕ್, ಟ್ವಿಟರ್ ನಲ್ಲಿ ಸಾವಿರಾರು ಜನ ವೀಕ್ಷಿಸಿ ಭೇಷ್ ಎಂದಿದ್ದಾರೆ.