ಇರುಳಿನ ವೇಳೆ ವಾಹನ ಚಾಲನೆ ಮಾಡುವ ಅಸ್ಸಾಂನ ಚಾಲಕರೊಬ್ಬರ ಕಥೆಯು ಗುವಾಹಾಟಿ ಪುಸ್ತಕ ಮೇಳದಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ.
ರೂಪಮ್ ದತ್ತಾ ಅವರ ’ಲೈಫ್ ಆಫ್ ಎ ಡ್ರೈವರ್ — ಕ್ಯಾಬಿನಾರ್ ಇಪಾರೆ’ ಕೃತಿಯು ಕಳೆದ ಡಿಸೆಂಬರ್ 30ರಂದು ಬಿಡುಗಡೆಯಾಗಿದ್ದು, ಅದಾಗಲೇ 200+ ಪ್ರತಿಗಳು ಮಾರಾಟವಾಗಿವೆ. 400 ಪುಟಗಳ ಈ ಪುಸ್ತಕವು ಸೂಪರ್ ಡ್ರೈವರ್ ಒಬ್ಬರ ಪಯಣದ ಮೇಲೆ ಬೆಳಕು ಚೆಲ್ಲಿದೆ. ಅಸ್ಸಾಂ ಉದ್ದಗಲಕ್ಕೂ ಈತ ಎದುರಿಸಿ ಬಂದ ಈತನ ಪ್ರತಿನಿತ್ಯದ ಹೋರಾಟವನ್ನು ಈ ಕೃತಿಯಲ್ಲಿ ವರ್ಣಿಸಲಾಗಿದೆ.
ಬಿಡುಗಡೆಯಾದ 20 ದಿನಗಳ ಅವಧಿಯಲ್ಲಿ ತನ್ನ 10ನೇ ಆವೃತ್ತಿಯ ಮಾರಾಟ ಕಾಣುತ್ತಿರುವ ಈ ಪುಸ್ತಕದ 800 ಪ್ರತಿಗಳು ಅದಾಗಲೇ ಮಾರಾಟವಾಗಿವೆ.
2002ರಿಂದ 2018ರವರೆಗೂ ಚಾಲಕನ ವೃತ್ತಿಯಲ್ಲಿದ್ದ ದತ್ತಾ ತಮ್ಮ ಕರ್ತವ್ಯದ ಅವಧಿಯಲ್ಲಿ ಎಂತೆಂಥಾ ರಿಸ್ಕ್‌ಗಳನ್ನು ಎದುರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ಚಾಲಕರಿಗೂ ಸಹ ಭಾವನೆಗಳು ಇದ್ದು, ಬಹುತೇಕ ಜನರು ನಮಗೆ ಮರ್ಯಾದೆ ಕೊಡುವುದಿಲ್ಲ. ರಿಸ್ಕ್ ತೆಗೆದುಕೊಳ್ಳುವುದು ಹೇಗೆ ಎಂದು ಚಾಲಕರಿಗೆ ಗೊತ್ತಿದೆ. ಈ ಕೃತಿಯ ಹಂದರವೇ ಚಾಲಕರು ಎಂತೆಂಥಾ ರಿಸ್ಕ್ ತೆಗೆದುಕೊಳ್ಳುತ್ತಾರೆ ಎನ್ನುವುದು,” ಎಂದು ದತ್ತಾ ತಿಳಿಸಿದ್ದಾರೆ.