ಉಕ್ಕೇರುತ್ತಿದ್ದ ಯಮುನಾ ನದಿಯಲ್ಲಿ ವಾಸುದೇವನು ಶ್ರೀಕೃಷ್ಣ ಪರಮಾತ್ಮನನ್ನು ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತು ಗೋಕುಲಕ್ಕೆ ಸಾಗಿಸಿದ್ದನಂತೆ.
ಇದು ಮಹಾಭಾರತ ಕಾಲದ ಪುರಾಣ ಕಥೆಗಳಲ್ಲಿ ಕಾಣಸಿಗುವ ಸನ್ನಿವೇಶ.
ಆದರೆ, ಈ ಕಲಿಯುಗದಲ್ಲೂ ಇಂತಹುದೇ ಒಂದು ಸನ್ನಿವೇಶ ಸದ್ಯಕ್ಕೆ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಸ್ಸಾಂನಲ್ಲಿ ಭಾರೀ ಮಳೆಯಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮುಳುಗಡೆ ಭೀತಿ ಎದುರಿಸುತ್ತಿದ್ದಾರೆ.
ಇಂತಹ ಪ್ರದೇಶದಲ್ಲಿನ ಸಂತ್ರಸ್ತರನ್ನು ರಕ್ಷಿಸುವ ಸಲುವಾಗಿ ಸ್ವತಃ ಇಲ್ಲಿನ ಶಾಸಕರೇ ನೆರೆಯ ನೀರಿಗಿಳಿದಿದ್ದು, ಮನೆ ಬಾಗಿಲಿಗೇ ಹೋಗಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.
ಶಾಸಕ ಮೃಣಾಲ್ ಸೈಕಿಯಾ ಅವರು ಎದೆ ಮಟ್ಟದವರೆಗಿನ ನೀರಿನಲ್ಲಿ ಸಂತ್ರಸ್ತರ ಮನೆವರೆಗೆ ನಡೆದುಕೊಂಡು ಹೋಗಿ, ಬಾಳೆದಿಂಡುಗಳಲ್ಲೇ ತಯಾರಿಸಿದ ತೆಪ್ಪದಲ್ಲಿ ಕರೆದುಕೊಂಡು ಬೋಟ್ ಗಳಿಗೆ ಹತ್ತಿಸುತ್ತಾ ಇದ್ದರು.
ಈ ವೇಳೆ ಬಾಳೆದಿಂಡಿನ ತೆಪ್ಪದಿಂದ ಬೋಟ್ ವರೆಗೆ ಪುಟ್ಟ ಮಗುವೊಂದನ್ನು ತಮ್ಮ ಅಂಗೈಯಲ್ಲಿ ಹೊತ್ತು ಬಂದ ಶಾಸಕರ ವಿಡಿಯೋ, ಫೋಟೋಗಳು ವೈರಲ್ ಆಗಿದ್ದು, ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
https://twitter.com/MrinalS66742364/status/1282220963669524484?ref_src=twsrc%5Etfw%7Ctwcamp%5Etweetembed%7Ctwterm%5E1282220963669524484%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fassam-mla-mrinal-saikia-goes-into-waist-deep-water-to-rescue-stranded-people-and-livestock-in-flood-watch%2F621733