ಮಳೆ ನೀರಿಗಾಗಿ ಏಕಾಂಗಿಯಾಗಿ 3 ಕಿ.ಮೀ. ಕಾಲುವೆ ತೋಡಿದ ಬಿಹಾರದ ರೈತನಿಗೀಗ ಅದೃಷ್ಟ ಖುಲಾಯಿಸಿದೆ.
ದನಕರುಗಳನ್ನು ಮೇಯಿಸಲು ಬೆಟ್ಟ-ಗುಡ್ಡ, ಕಾಡು-ಮೇಡು ಸುತ್ತುತ್ತಿದ್ದ ರೈತ, ಎತ್ತರದ ಪ್ರದೇಶದಿಂದ ತಗ್ಗುಪ್ರದೇಶಕ್ಕೆ ನೀರು ಹರಿಯುವ ವ್ಯವಸ್ಥೆ ಮಾಡಲು ಮುಂದಾದ. ಯಾರ ಸಹಾಯವನ್ನೂ ಕೇಳದೆ ತಾನೇ ಸಲಕರಣೆಗಳನ್ನು ಹಿಡಿದು ಕಾಲುವೆ ತೋಡಲು ಶುರು ಮಾಡಿದ.
ಸುಮಾರು 3 ಕಿ.ಮೀ. ಉದ್ದದ ಕಾಲುವೆ ತೋಡಲು ಆತ ತೆಗೆದುಕೊಂಡಿದ್ದು ಬರೋಬ್ಬರಿ 3 ದಶಕ. ಯಾವುದೇ ಅತ್ಯಾಧುನಿಕ ಸಾಧನಗಳಿಲ್ಲದೆ ಊರ ಜನರಿಗಾಗಿ ಇಷ್ಟು ಸಾಹಸ ಮಾಡಿದ ರೈತ, ಮಾಧ್ಯಮಗಳಲ್ಲಿ ಸುದ್ದಿಯಾದ.
ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆದ ರೈತನ ಸಾಧನೆ ಬಗ್ಗೆ ಅನೇಕರು ಪುಂಖಾನುಪುಂಖವಾಗಿ ಬರೆದರು. ಕೊನೆಗೆ ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಅವರ ಗಮನವನ್ನು ಟ್ವಿಟ್ಟರ್ ನಲ್ಲಿ ಸೆಳೆದಾಗ ಮೆಚ್ಚುಗೆ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ, ತಾಜ್ ಮಹಲ್, ಪಿರಮಿಡ್ ಇವೆಲ್ಲವೂ ಅನೇಕರ ಕಾರ್ಮಿಕರ ಶ್ರಮದಿಂದ ಒಬ್ಬರಿಗಾಗಿ ನಿರ್ಮಾಣ ಆದವು. ಆದರೆ, ಈ ಕಾಲುವೆ ಒಬ್ಬರಿಂದ ಅನೇಕರಿಗೆ ಆಗುತ್ತಿರುವ ಲಾಭ. ಹೀಗಾಗಿ ತಾಜ್, ಪಿರಮಿಡ್ ಗಿಂತ ಇದು ಬಹುದೊಡ್ಡ ಸ್ಮಾರಕ. ಈ ರೈತನಿಗೆ ನಮ್ಮ ಸಂಸ್ಥೆಯ ಟ್ರ್ಯಾಕ್ಟರ್ ನೀಡಬೇಕೆಂದಿದ್ದೇವೆ. ಇದು ನಮಗೇ ಹೆಮ್ಮೆ ಎಂದಿದ್ದಾರೆ.