ಪುರಿ ಜಗನ್ನಾಥ ಮಂದಿರದ ಮೇಲಿನ ಪವಿತ್ರ ಧ್ವಜವು ನಾಲ್ಕನೇ ಬಾರಿಗೆ ಭಗ್ನಗೊಂಡಿದ್ದು, ಒಡಿಶಾ ಜನರಲ್ಲಿ ಆತಂಕ ಮೂಡಿಸಿದೆ. ಒಂದಾದ ಮೇಲೊಂದರಂತೆ ಸಂಕಷ್ಟಗಳು ಬಂದೆರಗುತ್ತಲೇ ಇದ್ದು, ಈ ಬಾರಿ ಇನ್ಯಾವ ಕಷ್ಟ ಕಾರ್ಪಣ್ಯ ಕಾದಿದೆಯೋ ಎಂದು ಚಿಂತೆಗೊಳಗಾಗಿದ್ದಾರೆ.
ಕೊರೋನಾ ಭೀತಿ ಹೆಚ್ಚುತ್ತಿದ್ದು, ಸಾಕಷ್ಟು ಪ್ರಕೃತಿ ವಿಕೋಪಗಳೂ ಸಂಭವಿಸುತ್ತಿವೆ. ಈ ಹೊತ್ತಿನಲ್ಲಿ ಇನ್ನೇನು ದುರಂತದ ಮುನ್ಸೂಚನೆಯೋ ಎಂದು ಜನರು ಕಳವಳಕ್ಕೊಳಗಾಗಿದ್ದಾರೆ. ಮೊದಲ ಬಾರಿಗೆ ಹಾರಾಡುತ್ತಿದ್ದ ಧ್ವಜವು ಗಂಟು ಹಾಕಿಕೊಂಡು ಹಾರಾಡುವುದನ್ನು ನಿಲ್ಲಿಸಿತ್ತು. ಪಾಪಮೋಚನಿ ಏಕಾದಶಿ ಅಂದರೆ, ಕಳೆದ ವಾರ ಮಾನಸಿಕ ಧ್ವಜವು ಅಗ್ನಿ ಅವಘಡಕ್ಕೀಡಾಗಿತ್ತು. ಜಗನ್ನಾಥ ಮಂದಿರದ ಕಲಶದಿಂದ ಪತಿತಪಾವನ ಧ್ವಜವು ಬೇರ್ಪಟ್ಟಾಗ ಅಂಫಾನ್ ಚಂಡಮಾರುತ ಬಂದೆರಗಿ ಸಂಕಷ್ಟ ಸೃಷ್ಟಿಸಿತ್ತು.
ಈ ಮೂರು ದುರ್ಘಟನೆಗಳಿಂದ ಹೊರಬರಲು ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ಕಲಶದಲ್ಲಿ ಹಾರಾಡುತ್ತಿದ್ದ ಪತಿತಪಾವನ ಧ್ವಜವು ಹರಿದು ಹೋಗಿದ್ದು, ಒಂದು ಭಾಗ ಗೋಪುರದ ಮೇಲಿದ್ದರೆ, ಮತ್ತೊಂದು ಭಾಗ ಕಲಶದಲ್ಲಿ ಹಾರಾಡುತ್ತಿದೆ. ಇದು ಅಪಶಕುನದ ಸಂಕೇತ. ಕೂಡಲೇ ಸುಸ್ಥಿತಿಯಲ್ಲಿರುವ ಧ್ವಜವನ್ನು ಆರೋಹಣ ಮಾಡುವುದು ಒಳಿತು ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.