ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದ್ದು ಭಾರತದ ಶಾಂತಿ ಪ್ರಸ್ತಾವಕ್ಕೆ ಚೀನಾ ಮೌನ ವಹಿಸಿದೆ. ಸೇನಾ ಮುಖ್ಯಸ್ಥರು ಗಡಿಗೆ ದೌಡಾಯಿಸಿದ್ದಾರೆ.
ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಸತತ ನಾಲ್ಕು ದಿನ ನಡೆದ ಮಾತುಕತೆ ಫಲ ಕಾಣದ ಹಿನ್ನಲೆಯಲ್ಲಿ ಲಡಾಖ್, ಅರುಣಾಚಲಪ್ರದೇಶದಲ್ಲಿ ವಾಯುಸೇನೆ, ಭೂಸೇನೆಯ ಮುಖ್ಯಸ್ಥರು ಪರಿಶೀಲನೆ ನಡೆಸಿದ್ದಾರೆ.
ಚೀನಾದ ಆಕ್ರಮಣ ನಿರ್ವಹಿಸುವ ಸಾಮರ್ಥ್ಯ ನಮಗಿದೆ ಎಂದು ಸೇನಾ ಮಹಾದಂಡನಾಯಕ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಚೀನಾದ ದುಸ್ಸಾಹಸಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಭಾರತಕ್ಕಿದೆ. ಸರಿಯಾದ ಮಾರ್ಗಗಳ ಮೂಲಕ ಪರಿಸ್ಥಿತಿಯನ್ನು ನಿರ್ವಹಿಸುವ ಜಾಣ್ಮೆಯೂ ನಮಗಿದೆ ಎಂದು ಅವರು ಹೇಳಿದ್ದಾರೆ.
ಭೂಸೇನೆ ಮುಖ್ಯಸ್ಥ ಜ. ಎಂಎಂ ನರಾವಣೆ ಲಡಾಖ್ ಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ, ಸಿಕ್ಕಿಂ, ಅರುಣಾಚಲ ಪ್ರದೇಶದ ವಾಯುನೆಲೆಗಳಿಗೆ ಭೇಟಿ ನೀಡಿದ್ದಾರೆ. ಸದಾ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಯೋಧರಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಸೇನಾ ಮುಖ್ಯಸ್ಥರು ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ.