ದೇಶದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚಾಗ್ತಿರುವ ಹಿನ್ನೆಲೆ ಜನರು ಸೋಂಕು ಬಂದ್ಬಿಟ್ರೆ ಚಿಕಿತ್ಸೆಗೆ ಹಣವನ್ನ ಹೊಂದಿಸೋದು ಹೇಗೆ ಎಂದು ಚಿಂತಿತರಾಗ್ತಿದ್ದಾರೆ.
ಆದರೆ ಇದಕ್ಕೆ ನಿಮ್ಮ ಭವಿಷ್ಯ ನಿಧಿ ಸಹಾಯ ಮಾಡಲಿದೆ. ಇದಕ್ಕಾಗಿ ನೀವು ಇಪಿಎಫ್ ಖಾತೆಯಿಂದ ವೈದ್ಯಕೀಯ ವೆಚ್ಚಕ್ಕೆಂದು ಸಾಲ ಪಡೆಯಬಹುದಾಗಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿ, ಹೊಸ ಮನೆ ನಿರ್ಮಾಣ ಅಥವಾ ಖರೀದಿ, ಮನೆ ನವೀಕರಣ, ಗೃಹ ಸಾಲ ಮರುಪಾವತಿ ಹಾಗೂ ವಿವಾಹದ ಉದ್ದೇಶಗಳಿಗೆಂದು ಸಿಬ್ಬಂದಿ ಇಪಿಎಫ್ ಖಾತೆಯಿಂದ ಹಣ ಪಡೆಯಬಹುದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಮಾಹಿತಿ ನೀಡಿದೆ.
ಭವಿಷ್ಯ ನಿಧಿಯ ಮೂಲಕ ಸಿಬ್ಬಂದಿ ಕೋವಿಡ್ 19 ಚಿಕಿತ್ಸೆಗಾಗಿ ಹಣ ಪಡೆಯಬಹುದಾಗಿದೆ. ವೈಯಕ್ತಿಕ, ಪತಿ/ಪತ್ನಿ, ಮಕ್ಕಳು ಹಾಗೂ ಪೋಷಕರು ಸೋಂಕಿಗೆ ಒಳಗಾದಲ್ಲಿ ಈ ಹಣವನ್ನ ಪಡೆಯಬಹುದಾಗಿದೆ.
ಕೋವಿಡ್ 19 ಚಿಕಿತ್ಸೆಗಾಗಿ ಉದ್ಯೋಗಿಯು ತನ್ನ ತಿಂಗಳ ಸಂಬಳದ ಆರು ಪಟ್ಟು ಹೆಚ್ಚು ಅಥವಾ ಆತನ ಆದ್ಯತೆಗೆ ತಕ್ಕಂತೆ ಕಡಿಮೆ ಹಣವನ್ನ ಪಡೆಯಬಹುದಾಗಿದೆ.
ಪಿಎಫ್ ಖಾತೆಯಿಂದ ಹಣವನ್ನ ಪಡೆಯಲು ಸಿಬ್ಬಂದಿಯು ತನ್ನ ಯುಎಎನ್ ಸಂಖ್ಯೆ ಹಾಗೂ ಪಿಎಫ್ ಖಾತೆಯಲ್ಲಿ ಬ್ಯಾಂಕ್ ದಾಖಲೆಯನ್ನ ಲಗತ್ತಿಸಿಕೊಂಡಿರಬೇಕು.
ಈ ಇಪಿಎಫ್ ಹಣವು ಮೂರನೇ ವ್ಯಕ್ತಿಯ ಖಾತೆಗೆ ನೇರವಾಗಿ ಸಂದಾಯವಾಗೋದಿಲ್ಲ. ಭವಿಷ್ಯ ನಿಧಿ ಖಾತೆಯಲ್ಲಿ ವಿವರ ಒದಗಿಸಲಾದ ಬ್ಯಾಂಕ್ ಖಾತೆಗೇ ಹಣ ಸಂದಾಯವಾಗಲಿದೆ.
ತಂದೆಯ ಹೆಸರು ಹಾಗೂ ಉದ್ಯೋಗಿಯ ಹುಟ್ಟಿದ ದಿನಾಂಕ ಆತ ನೀಡುವ ಗುರುತಿನ ಚೀಟಿಗೆ ಹೋಲಿಕೆಯಾಗೋದು ಕೂಡ ಕಡ್ಡಾಯವಾಗಿದೆ.