ಆಂಧ್ರಪ್ರದೇಶದಲ್ಲಿ ಆಸ್ತಿ ನೋಂದಣಿ ವೇಳೆ ಚಿತ್ರೀಕರಣ ನಡೆಸುವ ವಿನೂತನ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಕಂದಾಯ ಇಲಾಖೆ ಭ್ರಷ್ಟಾಚಾರ ತಡೆಯಲು, ಬೇನಾಮಿ ಆಸ್ತಿ ವ್ಯವಹಾರ ಮತ್ತು ಅಕ್ರಮ ಆಸ್ತಿ ವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆಂಧ್ರ ಸರ್ಕಾರ ಆಸ್ತಿ ನೋಂದಣಿ ಪ್ರಕ್ರಿಯೆ ವೇಳೆ ಚಿತ್ರೀಕರಣ ನಡೆಸಲು ಮುಂದಾಗಿದೆ.
ಕಂದಾಯ ಇಲಾಖೆಯ ಕೇಂದ್ರೀಕೃತ ನಿಗಾ ವ್ಯವಸ್ಥೆಯಡಿಯಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಪ್ರಾಯೋಗಿಕವಾಗಿ 20 ನೋಂದಣಿ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಕಚೇರಿಗಳಿಗೆ ಮೂರು ಕ್ಯಾಮರಾ ಮತ್ತು ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಲಿದ್ದು ಆಸ್ತಿ ನೋಂದಣಿಯ ಸಂಪೂರ್ಣ ಪ್ರಕ್ರಿಯೆಗಳನ್ನು ಚಿತ್ರೀಕರಣ ಮಾಡಲಾಗುವುದು. ಮುಂದಿನ ಹಂತದಲ್ಲಿ 30 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ.