ಹೈದರಾಬಾದ್: ತೀರ್ಪುಗಳ ಕುರಿತಾದ ಮಾನ ಹಾನಿಕರ ಟೀಕೆಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಆಂಧ್ರಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಾಧೀಶರನ್ನು ದೂಷಿಸಿದ ಎಲ್ಲರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಬೇಕೆಂದು ಆಂಧ್ರ ಹೈಕೋರ್ಟ್ ಹೇಳಿದ್ದು, ಹೈಕೋರ್ಟ್ ತೀರ್ಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ನಿರೂಪಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಅಲ್ಲದೇ ತನಿಖೆಗೆ ಅಗತ್ಯ ಸಹಕಾರ ನೀಡುವಂತೆ ಆಂಧ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಹೈಕೋರ್ಟ್ ತೀರ್ಪುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಪೋಸ್ಟ್ ಗಳ ಕುರಿತಾಗಿ ಕೇಂದ್ರ ತನಿಖಾ ದಳ ಕ್ರಮ ಕೈಗೊಳ್ಳಲಿದೆ ಎಂದು ಕೋರ್ಟ್ ತಿಳಿಸಿದೆ. ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಆಡಳಿತವಿರುವ ಆಂಧ್ರಪ್ರದೇಶ ಸರ್ಕಾರದ 49 ಮುಖಂಡರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯ ನೋಟಿಸ್ ನೀಡಿದೆ.
ಆಂಧ್ರಪ್ರದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ನಾಲ್ವರು ನ್ಯಾಯಾಧೀಶರು ಚುನಾಯಿತ ಸರ್ಕಾರದ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ಆಂಧ್ರ ಸಿಎಂ ಜಗನಮೋಹನ್ ರೆಡ್ಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ನ್ಯಾಯಾಧೀಶರನ್ನು ದೂಷಿಸಿದ ಎಲ್ಲರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ನ್ಯಾಯಾಧೀಶರು ಪ್ರತಿಪಕ್ಷ ತೆಲುಗು ದೇಶಂ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಆಪ್ತರಾಗಿದ್ದಾರೆ ಎಂದು ಜಗನ್ ಮೋಹನ್ ರೆಡ್ಡಿ ಆರೋಪ ಮಾಡಿದ್ದರು.