ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಹೇಳುತ್ತಲೇ ಬಂದಿದೆ. ಮಹಿಳೆಯ ರಕ್ಷಣೆಗೆಂದೇ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಯೋಜನೆಯನ್ನೂ ಜಾರಿಗೆ ತರಲಾಗಿದೆ. ಆದರೆ ಇಷ್ಟೆಲ್ಲ ಪ್ರಯತ್ನಗಳ ಬಳಿಕವೂ ದೇಶದಲ್ಲಿ ಮಹಿಳೆಯರ ಕಲ್ಯಾಣ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಇಂದಿಗೂ ಸಹ ಬಿಹಾರದ ಪ್ರತಿ ಎರಡನೇ ಮಹಿಳೆ ಹಾಗೂ ಆಂಧ್ರಪ್ರದೇಶ ಪ್ರತಿ ಮೂರನೇ ಮಹಿಳೆ ಅನಕ್ಷರಸ್ಥರಾಗಿದ್ದಾರೆ. 2019-20ನೇ ಸಾಲಿನ ಈ ಸಮೀಕ್ಷೆಯಲ್ಲಿ ದೇಶದ 22 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನ ಭಾಗಿ ಮಾಡಲಾಗಿದೆ.
ಅಸ್ಸಾಂನಲ್ಲಿ 15-49 ವರ್ಷದೊಳಗಿನ ಮೂವರು ಮಹಿಳೆಯರಲ್ಲಿ ಕನಿಷ್ಟ ಇಬ್ಬರು ರಕ್ತಹೀನತೆ ಸಮಸ್ಯೆಯನ್ನ ಹೊಂದಿದ್ದಾರೆ. ಅಲ್ಲದೇ ದೇಶದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ದಾಖಲೆಗಳು ತೋರಿಸಿವೆ.
ಬಿಹಾರದಲ್ಲಿ ಪ್ರತಿ ಐವರು ಮಹಿಳೆಯರಲ್ಲಿ ನಾಲ್ವರು ಹಾಗೂ ತೆಲಂಗಾಣದಲ್ಲಿ ಪ್ರತಿ ನಾಲ್ವರು ಮಹಿಳೆಯರಲ್ಲಿ ಮೂವರು ಅಂತರ್ಜಾಲವನ್ನೇ ಬಳಕೆ ಮಾಡಿಲ್ಲ. ಕರ್ನಾಟಕ ಹಾಗೂ ಬಿಹಾರದಲ್ಲಿ ಕನಿಷ್ಟ 10 ಮಹಿಳೆಯರಲ್ಲಿ ನಾಲ್ವರು ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬ ವಿಚಾರ ಸಮೀಕ್ಷೆಯಲ್ಲಿ ಹೊರಬಿದ್ದಿದೆ. ಕರ್ನಾಟಕದಲ್ಲಿ ಕಳೆದ ಬಾರಿಯ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಈ ಬಾರಿಯ ಸಮೀಕ್ಷೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ದುಪ್ಪಟ್ಟಾಗಿದೆ.