ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ವಾಕ್ಸಮರ ಈಗ ಮುಗಿಲು ಮುಟ್ಟಿದ್ದು, ಅವರು ಏನು ಬೇಕಾದರೂ ಕ್ರಮಕೈಗೊಳ್ಳಲಿ. ನಾನು ಸತ್ಯವನ್ನು ಜನರ ಮುಂದಿಡುತ್ತೇನೆ. ನಾನು ಇಂದಿರಾಗಾಂಧಿ ಮೊಮ್ಮಗಳು ಎಂದು ಪ್ರಿಯಾಂಕಾ ಗಾಂಧಿ ಗುಡುಗಿದ್ದಾರೆ.
ಕಾನ್ಪುರದಲ್ಲಿನ ಮಕ್ಕಳ ಆಶ್ರಯ ನಿಲಯದಲ್ಲಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಚಾರ ಈ ಸಂಘರ್ಷಕ್ಕೆ ಕಾರಣವಾಗಿದ್ದು, ಮಾಧ್ಯಮ ವರದಿಯನ್ನಾಧರಿಸಿ ಉತ್ತರಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ನೋಟಿಸ್ ನೀಡಿದೆ.
ಹೀಗಾಗಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದು, ಸತ್ಯವನ್ನು ಬಹಿರಂಗ ಮಾಡುತ್ತಿರುವ ನನಗೆ ಕೆಲವೊಂದು ಇಲಾಖೆಗಳ ಮೂಲಕ ಪರೋಕ್ಷವಾಗಿ ಬೆದರಿಕೆ ಹಾಕಿ ಸುಮ್ಮನಾಗಿಸುವ ವ್ಯರ್ಥ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.