ಸಂತಾಪ ಸೂಚನೆಗಾಗಿ ಸಂಬಂಧಿಕರನ್ನ ಭೇಟಿಯಾಗಲು ಬಂದಿದ್ದ 45 ವರ್ಷದ ಮಹಿಳೆಯೊಬ್ಬರು ಎಟಿಎಂನಲ್ಲಿ ನಡೆಯುತ್ತಿದ್ದ ಕಳ್ಳತನವನ್ನ ತಪ್ಪಿಸಿದ ಘಟನೆ ಮಹಾರಾಷ್ಟ್ರದ ವಸೈನಲ್ಲಿ ನಡೆದಿದೆ. ಕಳ್ಳ ಎಟಿಎಂ ಕೇಂದ್ರದ ಒಳಗೆ ನುಗ್ಗಿದ್ದನ್ನ ಕಂಡ ಸುಕನ್ಯಾ ಪವಾರ್, ಕೂಡಲೇ ಶಟರ್ ಎಳೆದು ಬಳಿಕ ನೆರೆಹೊರೆಯವರನ್ನ ಎಚ್ಚರಿಸಿದ್ದಾರೆ.
ಸಂಬಂಧಿಕರೊಬ್ಬರು ನಿಧನರಾದ ಹಿನ್ನೆಲೆ ಸಂತಾಪ ಸೂಚಿಸಲು ಸುಕನ್ಯಾ ವಸೈಗೆ ಆಗಮಿಸಿದ್ದರು. ಮುಂಜಾನೆ 2.30ರ ಸುಮಾರಿಗೆ ಧಾರ್ಮಿಕ ಗ್ರಂಥವನ್ನ ಪಠಿಸುತ್ತಾ ಕುಳಿತಿದ್ದ ವೇಳೆ ಸುಕನ್ಯಾಗೆ ಎಟಿಎಂ ಕೇಂದ್ರದ ಬಳಿ ಶಬ್ದವಾದಂತೆ ಭಾಸವಾಗಿದೆ. ಕೂಡಲೇ ಎಟಿಎಂ ಕೇಂದ್ರದ ಬಳಿ ಈಕೆ ಆಗಮಿಸುತ್ತಾ ಇದ್ದಂತೆಯೇ ಶಟರ್ ಎಳೆದುಕೊಂಡಿರೋದನ್ನ ಸುಕನ್ಯಾ ಗಮನಿಸಿದ್ದಾರೆ.
ಅಲ್ಲದೇ ಎಟಿಎಂ ಒಡೆಯುತ್ತಿದ್ದ ಶಬ್ದ ಕೂಡ ಸುಕನ್ಯಾರಿಗೆ ಕೇಳಿದೆ. ಕೂಡಲೇ ಸಂಬಂಧಿಕರ ಮನೆಗೆ ವಾಪಸ್ಸಾದ ಮಹಿಳೆ ಲಾಕ್ನ್ನು ತೆಗೆದುಕೊಂಡು ಬಂದು ಕಳ್ಳನನ್ನ ಕೂಡಿ ಹಾಕಿ ಅಲಾರಂ ಆನ್ ಮಾಡುವ ಮೂಲಕ ನೆರೆಹೊರೆಯವರನ್ನ ಎಚ್ಚರಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಈ ಮಾಹಿತಿಯನ್ನ ರವಾನಿಸಲಾಯ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ. ಆತ ಸುತ್ತಿಗೆಯ ಸಹಾಯದಿಂದ ಪೊಲೀಸರು ಹಾಗೂ ಸಾರ್ವಜನಿಕರನ್ನ ಬೆದರಿಸಲು ಯತ್ನಿಸಿದ್ರೂ ಸಹ ಆತನನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಕಳ್ಳನನ್ನು 25 ವರ್ಷದ ಸಲೀಂ ಮನ್ಸೂರಿ ಎಂದು ಗುರುತಿಸಲಾಗಿದೆ. ಈತ ಎಟಿಎಂ ಮಷಿನ್ ಅನ್ನು ಒಡೆದು ಹಾಕಿದ್ದ. ಆದರೆ ಅದರೊಳಗಿದ್ದ 10 ಲಕ್ಷ ರೂಪಾಯಿಯನ್ನ ಕದಿಯುವ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.