ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಕಳಪೆಯಾಗುತ್ತಲೇ ಇದೆ. ಈಗಾಗಲೇ ದೆಹಲಿಯಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಗೆ ನಿರ್ಬಂಧ ಹೇರಲಾಗಿದೆ.
ವಾಯು ಮಾಲಿನ್ಯ ಹಾಗೂ ಕೊರೊನಾ ಎರಡೂ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರೋದ್ರಿಂದ ರಾಜಧಾನಿ ಮಂದಿ ಎಷ್ಟು ಎಚ್ಚರದಿಂದ ಇದ್ದರೂ ಕಡಿಮೆಯೇ.
ಮಾಲಿನ್ಯ ಅತಿಯಾಗ್ತಾ ಹೋದಂತೆ ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ ಸೇರಿದಂತೆ ಜೀವಕ್ಕೆ ಕುತ್ತು ತರುವ ಸಾಕಷ್ಟು ಸಮಸ್ಯೆಗಳು ನಮ್ಮನ್ನ ಆವರಿಸಿಕೊಳ್ಳಬಹುದು. ಹೀಗಾಗಿ ತಜ್ಞರು ವಾಯು ಮಾಲಿನ್ಯದಿಂದ ಕಾಪಾಡಿಕೊಳ್ಳಲು ಕೆಲ ಸಲಹೆಗಳನ್ನ ನೀಡಿದ್ದಾರೆ.
ನೀವು ಮನೆಯಿಂದ ಹೊರ ಹೋದಷ್ಟೂ ಮಾಲಿನ್ಯದ ಗಾಳಿಯನ್ನ ಕುಡಿಯುವ ಸಾಧ್ಯತೆ ಜಾಸ್ತಿ. ಹೀಗಾಗಿ ಪಾರ್ಕ್ಗಳಲ್ಲಿ ವಾಕ್ ಮಾಡುವ ಜನರು ಮನೆಯ ಆವರಣದಲ್ಲೇ ವಾಕ್ ಇಲ್ಲವೇ ಯೋಗಾಸನ ಮಾಡಬಹುದು. ಜನರಿಂದ ದೂರವಿದ್ದಷ್ಟೂ ಕೊರೊನಾ ಹರಡುವ ಸಾಧ್ಯತೆಯೂ ಕಡಿಮೆ ಅನ್ನೋದನ್ನ ಮರೆಯೋವಂತಿಲ್ಲ.
ಆನ್ಲೈನ್ ಟ್ರ್ಯಾಕಿಂಗ್ ಅಪ್ಲಿಕೇಶನ್ಗಳು ಇಲ್ಲವೇ ಎಫ್ಎಂ, ಟಿವಿಗಳಲ್ಲಿ ದಿನದ ವಾಯು ಮಾಲಿನ್ಯ ಮಟ್ಟ ಗೊತ್ತಾಗುತ್ತೆ. ಇದನ್ನ ಆಧರಿಸಿ ನೀವು ಮನೆಯಿಂದ ಹೊರಹೋಗಬಹುದೋ ಬೇಡವೋ ಎಂಬುದನ್ನ ನಿರ್ಧರಿಸಿ.
ವಯಸ್ಕರಿಗೆ ಮಾತ್ರವಲ್ಲದೇ ಮಕ್ಕಳಿಗೂ ಕೂಡ ಮಾಲಿನ್ಯ ಅಪಾಯಕಾರಿ. ಹೀಗಾಗಿ ಮಕ್ಕಳಿಗೆ ಹೊರಾಂಗಣ ಆಟಕ್ಕೆ ಕಳಿಸುವ ಬದಲು ಲುಡೋ, ಚೆಸ್, ಕೇರಂನಂತಹ ಆಟಗಳನ್ನ ಮನೆಯಲ್ಲೇ ಆಡಬಹುದು.
ಎಲ್ಲಕ್ಕೂ ಮುಖ್ಯವಾಗಿ ಧೂಮಪಾನ ನಿಷೇಧಿಸಿ, ಮಾಸ್ಕ್ ಧರಿಸಿ ಹಾಗೂ ಹಣ್ಣು – ತರಕಾರಿಗಳನ್ನ ಹೆಚ್ಚಾಗಿ ಸೇವಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.