ಇದು ಅಹಮದಾಬಾದ್ ಮಹಿಳೆಯ ದುರಂತ ಕಥೆ. ಅಂದುಕೊಂಡಂತೆಲ್ಲ ಜೀವನ ನಡೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ 45 ವರ್ಷದ ಮಹಿಳೆಗೆ ಮಕ್ಕಳಿರಲಿಲ್ಲ. ಗಂಡನ ಬಲವಂತಕ್ಕೆ ಮಣಿದು ಪ್ರಣಾಳ ಶಿಶು ಪಡೆಯಲು ಒಪ್ಪಿದ್ದಳು. ಕೊನೆಗೆ ಓರ್ವ ವೀರ್ಯದಾನಿಯಿಂದ ಅವಳಿ ಮಕ್ಕಳೂ ಜನಿಸಿದವು. ಅದನ್ನು ತಮ್ಮದೇ ಮಗು ಎಂದು ಒಪ್ಪಿಕೊಂಡು ಸತಿ-ಪತಿ ಇಬ್ಬರೂ ಸುಖಮಯ ಜೀವನ ಮಾಡುತ್ತಿದ್ದರು.
ಐದು ವರ್ಷ ಎಲ್ಲವೂ ಚೆನ್ನಾಗಿತ್ತು. ಬಳಿಕ ಕುಡಿಯಲು ಶುರು ಮಾಡಿದ ಗಂಡ, ಇವೆರಡೂ ತನ್ನ ಮಕ್ಕಳಲ್ಲ ಎನ್ನಲಾರಂಭಿಸಿದ. ವೀರ್ಯದಾನ ಮಾಡಿದವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯ ಎಂದು ಆರೋಪಿಸಿದ. ಇದೇ ವಿಚಾರವಾಗಿ ದಿನೇ ದಿನೇ ಜಗಳ ನಡೆದು ಆತನಿಂದ ಪರಿತ್ಯಕ್ತಳಾಗಿ ಮಕ್ಕಳನ್ನೂ ಕರೆದುಕೊಂಡು ಹೊರಬಂದಳು.
ಜೀವನ ನಡೆಸುವುದಕ್ಕಾಗಿ ಮನೆಕೆಲಸ ಮಾಡಿಕೊಂಡು ತಿಂಗಳಿಗೆ 15 ಸಾವಿರ ರೂ. ದುಡಿಯುತ್ತಿದ್ದಳು. ಕೊನೆಗೊಂದು ದಿನ ವೀರ್ಯದಾನ ಮಾಡಿದ ತನಗಿಂತ 10 ವರ್ಷ ಚಿಕ್ಕವನಾದ ಶಿಕ್ಷಕನನ್ನು ಭೇಟಿ ಮಾಡಿ ತನ್ನ ಕಣ್ಣೀರು ಕಥೆ ಹೇಳಿಕೊಂಡಳು. ಆತನಿಗೂ ಈಕೆಯ ಮೇಲೊಂದು ಮೃದುಧೋರಣೆ ಬಂದಿತು. ಅಲ್ಲೇ ಪ್ರೇಮಾಂಕುರವೂ ಆಯಿತು.
ಇಬ್ಬರೂ ಸೇರಿ ಆ ಮಕ್ಕಳನ್ನು ನೋಡಿಕೊಳ್ಳಲು ಶುರು ಮಾಡಿದರು. ಬಹಳ ಹತ್ತಿರ ಆದರು. ಆಕೆ ಮತ್ತೆ ಗರ್ಭವನ್ನೂ ಧರಿಸಿದಳು. ಮದುವೆ ಪ್ರಸ್ತಾಪ ಮುಂದಿಟ್ಟಾಗ ತಿರಸ್ಕರಿಸಿದ ವೀರ್ಯದಾನಿ, ಅವಳಿ ಮಕ್ಕಳನ್ನು ಕರೆದುಕೊಂಡು ಆಕೆಯನ್ನು ತ್ಯಜಿಸಿ ಹೊರಟುಬಿಟ್ಟ. ಐದು ತಿಂಗಳ ಗರ್ಭಿಣಿಯಾದ ಈಕೆಗೆ ಲಾಕ್ ಡೌನ್ ಪರಿಣಾಮದಿಂದ ಕೆಲಸವೂ ಹೋಯಿತು. ಮಾಲೀಕರೂ ಮನೆ ಬಿಡಿಸಿದರು. ಖಿನ್ನತೆಗೊಳಗಾಗಿ ಕೌನ್ಸೆಲಿಂಗ್ ಕೇಂದ್ರ ಸೇರಿರುವ ಮಹಿಳೆ, ಅಲ್ಲೇ ಇದ್ದಾಳೆ.