ನವದೆಹಲಿ: ಕೃಷಿ ಸಂಬಂಧಿತ ಶಿಕ್ಷಣವನ್ನು ಮಾಧ್ಯಮಿಕ ಶಿಕ್ಷಣ ಹಂತದಿಂದಲೇ ನೀಡುವ ಅಗತ್ಯವಿದೆ ಎನ್ನುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರಪ್ರದೇಶದ ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ ಕೇಂದ್ರ ಕೃಷಿ ವಿಶ್ವವಿದ್ಯಾಲಯ ಕಾಲೇಜು ಮತ್ತು ಆಡಳಿತಾತ್ಮಕ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಿಕ ಹಂತದಿಂದಲೇ ಪಠ್ಯದಲ್ಲಿ ಕೃಷಿಯನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಕೃಷಿ ಕ್ಷೇತ್ರವನ್ನು ಆತ್ಮ ನಿರ್ಭರ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕೆಂದು ಹೇಳಿದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಹಂತದಿಂದಲೇ ಕೃಷಿ ಸಂಬಂಧಿತ ಶಿಕ್ಷಣ ನೀಡುವ ಅಗತ್ಯತೆ ಬಗ್ಗೆ ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಯ ಮಟ್ಟದಲ್ಲಿ ಕೃಷಿ ವಿಷಯವನ್ನು ಪರಿಚಯಿಸುವ ಪ್ರಯತ್ನಗಳು ನಡೆದಿವೆ. ಇದರಿಂದ ಗ್ರಾಮೀಣ ಭಾರತದ ಸಬಲೀಕರಣ ಸಾಧ್ಯವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಕೃಷಿ ತಂತ್ರಜ್ಞಾನದ ಬಗ್ಗೆ ಜ್ಞಾನ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.