ಆಗ್ರಾ: 142 ದಿನಗಳ ಸುದೀರ್ಘ ಲಾಕ್‌ಡೌನ್ ಬಳಿಕ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತವಾಗಿದೆ.
ಯಮುನಾ ನದಿ ತಟದ ಮೆಹತಾಬ್ ಬಾಗ್ ನ ವೀಕ್ಷಣಾ ಗೋಪುರವನ್ನು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ಗುರುವಾರ ತೆರೆದಿದೆ. ಪ್ರವೇಶಕ್ಕೂ ಮುಂಚೆ ಥರ್ಮಲ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಐಎಎಸ್) ಮಾರ್ಚ್ 17 ರಿಂದ ಎಲ್ಲ ಸ್ಮಾರಕಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿತ್ತು. ಮಾರ್ಚ್ 22 ರ ಜನತಾ ಕರ್ಪ್ಯು ನಂತರ ಪಾರ್ಕ್ ಹಾಗೂ ಇತರ ಪ್ರವಾಸಿ ತಾಣಗಳಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು.
ಜುಲೈ 6 ರಿಂದ ಸ್ಮಾರಕಗಳ ವೀಕ್ಷಣೆಗೆ ಐಎಎಸ್ ಅವಕಾಶ ನೀಡಿದ್ದರೂ ಆಗ್ರಾ ಜಿಲ್ಲಾಡಳಿತ ತಾಜ್ ಮಹಲ್ ವ್ಯೂ ಪಾಯಿಂಟ್ ತೆರೆಯಲು ಅವಕಾಶ ನೀಡಿರಲಿಲ್ಲ.
ಮೊದಲ ದಿನ ಕೆಲವೇ ಕೆಲವು ಪ್ರವಾಸಿಗರು ಆಗಮಿಸಿದ್ದರು. ಅವರಲ್ಲಿ ತಾವು ಇಷ್ಟು ದಿನದ ನಂತರ ಭವನ ನೋಡುತ್ತಿರುವ ಮೊದಲಿಗರು ಎಂಬ ಹೆಮ್ಮೆ ಇತ್ತು.