ದೇಶದಲ್ಲಿ ಮಹಿಳೆಯರು ಮದುವೆ ಆಗಲು ಇರುವ ಕನಿಷ್ಠ ವಯೋಮಾನದ ಮಿತಿಯನ್ನು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ಮಾಡುತ್ತಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಇರುವ ಕನಿಷ್ಠ ಮಿತಿಯಾದ 18 ವರ್ಷ ವಯಸ್ಸಿಗೆ ಹೆಂಗಸರು ಮಕ್ಕಳನ್ನು ಹೆರುವಷ್ಟು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೊಂದಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ವತಂತ್ರ‍್ಯೋತ್ಸವದ ಭಾಷಣದ ವೇಳೆ ಇದೇ ವಿಚಾರವಾಗಿ ಮಾತನಾಡಿದ್ದ ಪ್ರಧಾನಿ, ಹೆಂಗಸರಿಗೆ ಮದುವೆ ಆಗಲು ಇರುವ ಕನಿಷ್ಠ ವಯೋಮಾನದ ಮಿತಿ ಬಗ್ಗೆ ಹೆಚ್ಚಿನ ಚಿಂತನೆ ಮಾಡಲು ಸಮಿತಿ ರಚಿಸುವುದಾಗಿ ತಿಳಿಸಿದ್ದರು.
ಸರ್ಕಾರದ ದತ್ತಾಂಶವೊಂದರ ಪ್ರಕಾರ ದೇಶದ ಕೇಂದ್ರ ಹಾಗೂ ಪೂರ್ವ ಭಾಗಗಳಲ್ಲಿ ಹುಡುಗಿಯರು ಬಹಳ ಬೇಗ ಮದುವೆಯಾಗುತ್ತಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಉತ್ತರ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಮಹಿಳೆಯರು ಒಂದಷ್ಟು ಸಮಯ ಕಾದು ಬಳಿಕ ಮದುವೆಯಾಗುವ ಆಲೋಚನೆ ಹೊಂದಿರುವುದಾಗಿ ತಿಳಿದುಬಂದಿದೆ.
ಕರ್ನಾಟಕದಲ್ಲಿ ಮದುವೆಯಾಗುವ ಮಹಿಳೆಯರ ಸರಾಸರಿ ವಯೋಮಾನವು 22.3 ವರ್ಷಗಳಷ್ಟಿದೆ. ನೆರೆಯ ಕೇರಳ ಹಾಗೂ ತಮಿಳುನಾಡುಗಳಲ್ಲಿ ಇದು 23 ವರ್ಷಗಳಷ್ಟಿದೆ. ಜಮ್ಮುವಿನಲ್ಲಿ ಈ ವಿಚಾರವಾಗಿ ಅತ್ಯಂತ ಹೆಚ್ಚಿನ ಸರಾಸರಿ 25.1 ವರ್ಷದಷ್ಟು ಇದೆ.
ಗ್ರಾಮಾಂತರ ಪ್ರದೇಶಗಳಲ್ಲಿರುವ ಹಾಗು ಹೆಚ್ಚಿನ ಶಿಕ್ಷಣ ಪಡೆಯದ ಮಹಿಳೆಯರು ಸಾಮಾನ್ಯವಾಗಿ ಬೇಗನೇ ಮದುವೆಯಾಗುವ ವಿಚಾರ ಈ ದತ್ತಾಂಶದಲ್ಲೂ ಕಂಡು ಬಂದಿರುವುದು ಅಚ್ಚರಿಯೇನಲ್ಲ. ಹಾಗೇ ಆರ್ಥಿಕ ಸ್ಥಿತಿಗತಿ ಚೆನ್ನಾಗಿದ್ದಷ್ಟೂ ಮದುವೆಯಾಗುವ ಸರಾಸರಿ ವಯೋಮಾನ ಹೆಚ್ಚಿರುವ ಅಂಶವೂ ಇದೇ ವೇಳೆ ಕಂಡುಬಂದಿದೆ.