ನವದೆಹಲಿ: ಲಾಕ್‌ಡೌನ್ ನಿಂದ ತೊಂದರೆಗೀಡಾದ ವಕೀಲರು ಹಾಗೂ ಕ್ಲರ್ಕ್ ಗಳಿಗೆ ಸುಪ್ರೀಂ ಕೋರ್ಟ್ ವಕೀಲರ ಸಂಘ ಟ್ರಸ್ಟ್ ನಿಂದ ನೆರವು ನೀಡಲಾಗಿದೆ.
136 ವಕೀಲರಿಗೆ ತಲಾ 10 ಸಾವಿರ ರೂ. ಹಾಗೂ 20 ಕ್ಲರ್ಕ್ ಗಳಿಗೆ ತಲಾ 5 ಸಾವಿರ ರೂ.ಗಳನ್ನು ನೀಡಲಾಗಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಗೆ ಹಲವು ಹೆಸರಾಂತ ವಕೀಲರು ದೇಣಿಗೆ ನೀಡಿದ್ದಾರೆ. ಹರೀಶ್ ಸಾಳ್ವೆ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ಅವರು 1 ಕೋಟಿ, ಹಾಗೂ 25 ಲಕ್ಷ ರೂಪಾಯಿ ನೀಡಿ ಕೆಲ ವರ್ಷದ ಹಿಂದೇ ಟ್ರಸ್ಟ್ ಆರಂಭಿಸಿದ್ದರು.
ಲಾಕ್‌ಡೌನ್ ಪ್ರಾರಂಭವಾದ ನಂತರ ಟ್ರಸ್ಟ್ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿತು. ಅಟಾರ್ನಿ ಜನರಲ್ ಕೆ.ಸಿ. ವೇಣುಗೋಪಾಲ್ 15 ಲಕ್ಷ ರೂ., ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ 13.5 ಲಕ್ಷ ರೂ. ದೇಣಿಗೆ ನೀಡಿದರು. ಸುಪ್ರೀಂ ಕೋರ್ಟ್ ನಿವೃತ್ತ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ವಿಕಾಸ್ ಸಿಂಗ್ 10 ಲಕ್ಷ ಕಳಿಸಿದ್ದರು.
ಮಾಜಿ ಎಜಿ ಮುಕುಲ್ ರೊಹಟಗಿ, ಮಾಜಿ ಎಸ್ ಜಿ ರಂಜಿತ್ ಕುಮಾರ್, ಹಿರಿಯ ವಕೀಲ ರಾಜೇಶ್ ದ್ವಿವೇದಿ ತಲಾ 5 ಲಕ್ಷ ರೂ. ನೀಡಿದ್ದಾರೆ. ಲೂಥ್ರಾ ಹಾಗೂ ಅವರ ಸಹೋದರಿ ಗೀತಾ 2.5 ಲಕ್ಷ ರೂ., ಫಾಲಿನಾರಿಮನ್, ವಿಜಯ ಹಂಸಾರಿಯಾ, ಶಿವಾಜಿ ಜಾಧವ್ ತಲಾ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ.