ಕೇಂದ್ರ ಸರ್ಕಾರ 59 ಚೈನೀಸ್ ಮೊಬೈಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಒಂದು ದಿನದ ನಂತರ ಇದೀಗ ಕೊಲ್ಕತ್ತಾ ಹೈಕೋರ್ಟ್ ಚೈನೀ ಮಾಂಜಾವನ್ನು ನಿಷೇಧಿಸಿದೆ.
ಗಾಳಿಪಟಗಳಿಗೆ ಬಳಸುವ ಪುಡಿ ಗಾಜಿನಿಂದ ಲೇಪಿತವಾದ ಮಾಂಜಾ (ದಾರ) ಚೈನಾದಿಂದ ಸರಬರಾಜಾಗುತ್ತಿತ್ತು. ಇದರಿಂದ ಕೋಲ್ಕತ್ತಾ ನಗರದಾದ್ಯಂತ ಅನೇಕ ಅವಘಡಗಳು ನಡೆದು ಸಾವು ಸಹ ಸಂಭವಿಸಿತ್ತು.
ಚೈನಿ ದಾರಕ್ಕೆ ಸಿಕ್ಕಿಹಾಕಿಕೊಂಡ ನಂತರ ಹಲವು ಬೈಕ್ ಸವಾರರ ಕುತ್ತಿಗೆ ಮತ್ತು ಮುಖಕ್ಕೆ ಗಾಯಗಳಾಗಿದ್ದವು. ಕಳೆದ ಎರಡು ತಿಂಗಳಿನಿಂದ ಕೋಲ್ಕತ್ತಾ ನಗರ ಮತ್ತು ದೇಶದ ಇತರ ಭಾಗಗಳಲ್ಲಿ ಹಲವು ಸಾವು ಇದರಿಂದಲೇ ಸಂಭವಿಸಿತ್ತು.
ಗಾಜಿನಪುಡಿ ಲೇಪಿತ ಚೈನಿ ಮಾಂಜಾ ಮತ್ತು ನೈಲಾನ್ ದಾರದಿಂದ ಮನುಷ್ಯರಿಗೆ, ಇತರೆ ಜೀವಿಗಳಿಗೆ ಅಪಾಯವೆಂದು ಈಗಾಗಲೇ ಹಲವು ರಾಜ್ಯಗಳು ನಿಷೇಧಿಸಿವೆ. ನಿಷೇಧದ ಹೊರತಾಗಿಯೂ ದೇಶಾದ್ಯಂತ ಜಾಗೃತಿ ಕೊರತೆಯಿಂದ ಬಳಕೆಯಲ್ಲಿದೆ.
ಹೈದರಾಬಾದ್, ಕೋಲ್ಕತ್ತಾ, ದೆಹಲಿ, ಸೂರತ್ ಬೆಂಗಳೂರಿನಂತಹ ನಗರಗಳಿಂದ ಈ ದಾರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಅಕ್ರಮವಾಗಿ ವಿವಿಧ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ದೆಹಲಿ ಸರ್ಕಾರ ಈಗಾಗಲೇ ಚೈನೀಸ್ ಮಾಂಜಾ ಮಾರಾಟ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸಿತ್ತು.