
ಬಿಹಾರದಲ್ಲಿ ಇತ್ತೀಚೆಗೆ ಮುಕ್ತಾಯವಾದ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎ ಬಣದ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಡಿಸೆಂಬರ್ 3ರಂದು ’ಧನ್ಯವಾದ ಸಮ್ಮೇಳನ’ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಈ ಮೂಲಕ ತಮ್ಮ ಪಕ್ಷದ ಮೇಲೆ ಭರವಸೆ ಇಟ್ಟ ರಾಜ್ಯದ ಮತದಾರರಿಗೆ ಧನ್ಯವಾದ ತಿಳಿಸುವುದಾಗಿ ಬಿಜೆಪಿ ಹೇಳಿಕೊಂಡಿದೆ. ಬಿಹಾರದ ಎಲ್ಲ ಪ್ರದೇಶಗಳಲ್ಲೂ ಸಹ ಈ ಯಾತ್ರೆಯನ್ನು ಹಮ್ಮಿಕೊಳ್ಳಲಿರುವ ಬಿಜೆಪಿ ಡಿಸೆಂಬರ್ 3-25ರ ನಡುವೆ ತನ್ನೆಲ್ಲಾ ಶಾಸಕರನ್ನು ಜನರೊಂದಿಗೆ ಬೆರೆಯಲು ಕರೆದೊಯ್ಯುತ್ತಿದೆ.
ಹಿಂದಿಗಿಂತ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ತಾನು ಉತ್ತಮವಾಗಿ ಪ್ರದರ್ಶನ ಕೊಟ್ಟಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. ಜೆಡಿಯು ಸೇರಿದಂತೆ ಸಣ್ಣಪುಟ್ಟ ಪಕ್ಷಗಳನ್ನು ಕಟ್ಟಿಕೊಂಡು ಎನ್‌ಡಿಎ ಬಣ ಮಾಡಿಕೊಂಡಿರುವ ಬಿಜೆಪಿ, 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದೇ ವೇಳೆ ಮಹಾಘಟಬಂಧನದ ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.